ಸಿರ್ಸಾ (ಹರಿಯಾಣ):ಕೇರಳದಲ್ಲಿ ಗರ್ಭಿಣಿ ಆನೆಯ ಬಾಯಿಗೆ ಅನಾನಸ್ ಜೊತೆ ಪಟಾಕಿ ಇಟ್ಟು ತಿನ್ನಿಸಿದ್ದರಿಂದ ಅದು ಸ್ಫೋಟಗೊಂಡು ಬಾಯಿಗೆ ಗಂಭೀರ ಗಾಯವಾಗಿ ಆನೆ ಸಾವನ್ನಪ್ಪಿದ ಘಟನೆ ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಇದೇ ರೀತಿಯ ಹೃದಯವಿದ್ರಾವಕ ಘಟನೆಯೊಂದು ಹರಿಯಾಣದಲ್ಲಿ ನಡೆದಿದೆ. ಹುಲ್ಲು ತಿನ್ನುವಾಗ ಬಾಯಿಯಲ್ಲಿ ಸ್ಫೋಟಕವೊಂದು ಸ್ಫೋಟಿಸಿದ್ದರಿಂದ ಹಸು ಸಾವನ್ನಪ್ಪಿದೆ.
ಹರಿಯಾಣದ ಸಿರ್ಸಾ ಜಿಲ್ಲೆಯ ಲುಖುವಾನಾ ಗ್ರಾಮದಲ್ಲಿ ಪಶುಸಂಗೋಪನೆ ನಡೆಸುತ್ತಿರುವ ಸತ್ಪಾಲ್ ಸಿಂಗ್ ಎಂಬುವರಿಗೆ ಸೇರಿದ ಹಸು ಗದ್ದೆಯಲ್ಲಿ ಮೇಯುತ್ತಿದ್ದಾಗ ಸ್ಫೋಟಕ ಸಿಡಿದು ಬಾಯಿಗೆ ಗಂಭೀರ ಗಾಯವಾಗಿ ಹಸು ಮೃತಪಟ್ಟಿದೆ. ಉದ್ದೇಶಪೂರ್ವಕವಾಗಿ ಹಸುವಿನ ಬಾಯಿಗೆ ಸ್ಫೋಟಕಗಳನ್ನು ತುರುಕಿ ಸ್ಫೋಟಿಸಿದ್ದರಿಂದ ಈ ಘಟನೆ ನಡೆದಿದೆ ಎಂದು ಸತ್ಪಾಲ್ ಠಾಣೆಗೆ ದೂರು ನೀಡಿದ್ದಾರೆ.