ಚಂಡೀಗಢ: ಹರಿಯಾಣ ಸಿಎಂ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಮತ್ತು ಶಾಸಕರು ಇಂದು (ಬುಧವಾರ) ತಮ್ಮ ಕಚೇರಿಗಳಿಗೆ ಸೈಕಲ್ನಲ್ಲಿಯೇ ತೆರಳಿ ಗಮನ ಸೆಳೆದರು.
ಇಂದು ವಿಶ್ವ ಕಾರ್ ಪ್ರೀ ದಿನದ ಹಿನ್ನೆಲೆಯಲ್ಲಿ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಸೈಕಲ್ ಏರಿದರು. ಈ ದಿನದ ನಿಮಿತ್ತ ತಮ್ಮ ಕಾರುಗಳನ್ನು ಬಿಟ್ಟು ಸಂಚರಿಸುವ ನಿಟ್ಟಿನಲ್ಲಿ ಸಿಎಂ, ಸಂಪುಟ ಸಹೋದ್ಯೋಗಿಗಳು ಹಾಗೂ ಶಾಸಕರು ಸೈಕಲ್ ಏರಿ ಸಚಿವಾಲಯಗಳಿಗೆ ತೆರಳಿದರು.
ಸಚಿವಾಲಯಕ್ಕೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಮೊದಲಿನಿಂದಲೂ ಎಲೆಕ್ಟ್ರಿಕ್ ವಾಹನಗಳ ಮೇಲೆ ಸಬ್ಸಿಡಿ ನೀಡಲಾಗುತ್ತಿದ್ದು, ಹರಿಯಾಣ ಸರ್ಕಾರ ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನ ನೀತಿಯನ್ನು ತರಲಿದೆ. ಇದರಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿ ಸಹ ಪರಿಗಣಿಸಲಾಗುತ್ತಿದೆ ಎಂದು ಹೇಳಿದರು.
ಇಂದು ವಿಶ್ವ ಕಾರು ರಹಿತ ದಿನವನ್ನು ಆಚರಿಸಲಾಗುತ್ತಿದ್ದು, ಪ್ರಕೃತಿಯ ರಕ್ಷಣೆಗಾಗಿ ಖಾಸಗಿ ವಾಹನಗಳನ್ನು ಬಳಸದೇ ನೀವು ಕೂಡ ಈ ಮಾರ್ಗವನ್ನು ಅನುಸರಿಸಲು ಮುಂದಾಗಬೇಕು ಎಂದು ಹರಿಯಾಣದ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದೆ.