ಹರಿಯಾಣ: ಇಂದು ಕೇಂದ್ರ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯ ಭಾಗವಾಗಿ ಭಾರೀ ಅನಾಹುತಗಳೇ ಜರುಗಿವೆ. ಕೇಂದ್ರದ ಕೃಷಿ ಕಾಯ್ದೆ ಬಗ್ಗೆ ಮಾಹಿತಿ ನೀಡಲು ಹೋದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಪ್ರತಿಭಟನಾಕಾರರಿಂದ ತೀವ್ರ ಪ್ರತಿರೋಧ ಎದುರಿಸುವಂತಾಗಿದೆ. 'ಕಿಸಾನ್ ಪಂಚಾಯತ್' ಕಾರ್ಯಕ್ರಮ ರದ್ದುಗೊಳಿಸಿ ಸಿಎಂ ಖಟ್ಟರ್ ಅರ್ಧ ದಾರಿಯಲ್ಲೇ ಕಾಪ್ಟರ್‌ನಲ್ಲಿ ವಾಪಸ್ ಆಗಿದ್ದಾರೆ.
ಕರ್ನಾಲ್ ಹಳ್ಳಿಯಲ್ಲಿ ಸಭೆಗೆ ಸಿದ್ಧಪಡಿಸಿದ್ದ ವೇದಿಕೆಯನ್ನೇ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ. ಭದ್ರತೆಗಾಗಿ ವೇದಿಕೆಯ ಮುಂದೆ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಬೇಧಿಸಿ, ವೇದಿಕೆಯ ಮೇಲೆ ಏರಿ ಹೂವಿನ ಮಡಿಕೆಗಳು, ಟೇಬಲ್‌ಗಳು ಮತ್ತು ಕುರ್ಚಿಗಳನ್ನು ಒಡೆದು ಹಾಕಿದ್ದಾರೆ. ಹಾಗೆಯೇ ಬ್ಯಾನರ್‌ಗಳನ್ನು ಹರಿದು ವೇದಿಕೆ ಅಲಂಕರಿಸಲು ಬಳಸಿದ್ದ ತಂತಿ ಹೂವುಗಳನ್ನು ಕಿತ್ತು ಬಿಸಾಕಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿದ್ದ ಸಾವಿರಾರು ರೈತರು ಕೇಂದ್ರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ ಮಸೂದೆಗಳನ್ನು ರದ್ದುಗೊಳಿಸುವಂತೆ ಘೋಷಣೆಗಳನ್ನು ಕೂಗಿದ್ದಾರೆ. ಹಾಗೆಯೇ ಸಮೀಪದ ಹೆದ್ದಾರಿಯಲ್ಲಿ ಕಪ್ಪು ಬಾವುಟ ಹಿಡಿದುಕೊಂಡು ನೂರಾರು ರೈತರು ಜಮಾವಣೆಗೊಂಡಿದ್ದರು. ಸಭೆ ನಡೆಯುವ ಸ್ಥಳವನ್ನು ನಾಶ ಮಾಡುವ ಮುನ್ನ ಕಪ್ಪು ಧ್ವಜಗಳನ್ನು ಹಿಡಿದುಕೊಂಡು ಬಂದ ರೈತರು, ಕೈಮ್ಲಾ ಗ್ರಾಮದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ಗೆ ದಾಳಿ ಇಟ್ಟರು. ಇದಕ್ಕೂ ಮುನ್ನ ಪೊಲೀಸರು ನಿಯೋಜನೆ ಮಾಡಿದ್ದ ಆರು ಚೆಕ್‌ಪೋಸ್ಟ್‌ಗಳನ್ನು ಬೇಧಿಸಿದರು.
ಇವರೆಲ್ಲರೂ ರ್ಯಾಲಿ ಸ್ಥಳದ ಕಡೆಗೆ ಮೆರವಣಿಗೆ ಪ್ರಾರಂಭಿಸಿದಾಗ, ಪೊಲೀಸರು ಇವರ ಮೇಲೆ ಅಶ್ರುವಾಯು, ಟಿಯರ್ ಗ್ಯಾಸ್ ಪ್ರಯೋಗ ನಡೆಸಿದ್ದಾರೆ. ಇಷ್ಟಾದ್ರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಲಾಠಿ ಚಾರ್ಜ್ ಕೂಡ ನಡೆಸಿದ್ದಾರೆ. ಈ ವೇಳೆ ಕೆಲವು ರೈತರು ತಪ್ಪಿಸಿಕೊಳ್ಳಲು ಹೊಲಗಳಲ್ಲಿ ಅಡಗಿಕೊಳ್ಳಬೇಕಾದ ಪರಿಸ್ಥಿತಿ ಕೂಡ ನಿರ್ಮಾಣ ಆಗಿತ್ತು.