ಭಿವಾನಿ (ಹರಿಯಾಣ):ದೇಶದಲ್ಲೇಅತ್ಯಂತ ಹೆಚ್ಚಿನ ಹಾಲು ಉತ್ಪಾದನೆ ಮಾಡುವ ರಾಜ್ಯವೆಂದರೆ ಅದು ಹರಿಯಾಣ. ಕೃಷಿ ಪ್ರಧಾನ ರಾಜ್ಯವಾಗಿರುವ ಹರಿಯಾಣದಲ್ಲಿ ಹೈನುಗಾರಿಕೆ ಪ್ರಮುಖ ಉದ್ಯಮವಾಗಿದೆ. ಹಾಗಾಗಿ ಹೆಚ್ಚಿನ ಹಾಲು ಉತ್ಪಾದನೆ ಮಾಡುವ ದೇಶದ ನಂಬರ್ ಒನ್ ರಾಜ್ಯವಾಗಿ ಹರಿಯಾಣ ಗುರುತಿಸಿಕೊಂಡಿದೆ. ಇಲ್ಲಿನ ಎಮ್ಮೆಗಳಿಗೂ ದೇಶಾದ್ಯಂತ ಹೆಚ್ಚಿನ ಬೇಡಿಕೆ ಇದೆ.
ಭಿವಾನಿ ಜಿಲ್ಲೆಯ ಜೂಯಿ ಗ್ರಾಮದ ನಿವಾಸಿ ಸಂಜಯ್ ಎಂಬುವವರು ಸಾಕಿರುವ ಎಮ್ಮೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಧರ್ಮ ಎಂಬ ಹೆಸರಿನ ಎಮ್ಮೆ ದಿನಕ್ಕೆ 15 ಲೀಟರ್ ಹಾಲನ್ನು ನೀಡುತ್ತದೆ. 3 ವರ್ಷ ವಯಸ್ಸಿನ ಈ ಎಮ್ಮೆಗೆ 46 ಲಕ್ಷದ ಬೇಡಿಕೆ ಬಂದಿದೆ. ಆದರೆ 61 ಲಕ್ಷ ರೂ.ಗೆ ಮಾರಾಟ ಮಾಡುವುದಾಗಿ ಮಾಲೀಕ ಹೇಳಿದ್ದಾನೆ. ಈ ಎಮ್ಮೆಗೆ ಶುಚಿಯಾದ ಹಸಿರು ಮೇವು, ಧಾನ್ಯಗಳನ್ನು ನೀಡಲಾಗುತ್ತದೆ. ಚಳಿಗಾಲದಲ್ಲಿ ಪ್ರತಿದಿನ 40 ಕೆಜಿ ಕ್ಯಾರೆಟ್ ನೀಡಲಾಗುತ್ತದೆ. ಸೌಂದರ್ಯದಲ್ಲೂ ಧರ್ಮ ಆಕರ್ಷಕವಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ನಡೆದ ಸೌಂದರ್ಯಯುತವಾದ ಎಮ್ಮೆಗಳ ಸ್ಪರ್ಧೆಯಲ್ಲಿ ಅನೇಕ ಪ್ರಶಸ್ತಿಗಳನ್ನು ಈ ಎಮ್ಮೆ ಗೆದ್ದಿದೆ ಎಂದು ಮಾಲೀಕ ಸಂಜಯ್ ಹೇಳಿದ್ದಾರೆ. ಪಶುವೈದ್ಯ ಹೃತಿಕ್ ಎಂಬುವವರು ಕೂಡ ಎಮ್ಮೆ ಬಗ್ಗೆ ವರ್ಣನೆ ಮಾಡಿದ್ದು, ಇದು ನೋಡಲು ತುಂಬ ಆಕರ್ಷಕವಾಗಿದೆ. ಸೌಂದರ್ಯದ ವಿಷಯದಲ್ಲಿ ಧರ್ಮ ಎಮ್ಮೆಗಳ ರಾಣಿಯಾಗಿದೆ. ಸೌಂದರ್ಯ ಮತ್ತು ತಳಿಯ ದೃಷ್ಟಿಯಿಂದ ಈ ಎಮ್ಮೆ ಹರಿಯಾಣದ ಅತ್ಯಂತ ಸುಂದರ ಎಮ್ಮೆಯಾಗಿದೆ ಎಂದು ಪಶು ವೈದ್ಯರು ಹೇಳಿದ್ದಾರೆ.
ಜಾನುವಾರು ಸಾಕಣೆದಾರರಿಗೆ ಹರಿಯಾಣ ಸರ್ಕಾರದ ಬೆಂಬಲ:ಈ ದುಬಾರಿ ತಳಿಯ ಎಮ್ಮೆಗಳಿಂದಾಗಿ ಹರಿಯಾಣವು ದೇಶದ ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದ ಜಾನುವಾರು ಸಾಕಣೆದಾರರು ದುಬಾರಿ ಮತ್ತು ಉತ್ತಮ ಗುಣಮಟ್ಟದ ದನ ಮತ್ತು ಎಮ್ಮೆಗಳನ್ನು ಸಾಕಲು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ರೈತರನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಕಾಲಕಾಲಕ್ಕೆ ಅನೇಕ ಪ್ರಾಣಿಗಳ ಪ್ರದರ್ಶನವನ್ನು ಸಹ ಆಯೋಜಿಸುತ್ತದೆ. ಜತೆಗೆ ಉತ್ತಮ ತಳಿಯ ಪ್ರಾಣಿಗಳ ಪಾಲನೆ ಮಾಡಿದವರಿಗೆ ರಾಜ್ಯ ಸರ್ಕಾರ ಬಹುಮಾನವನ್ನೂ ನೀಡುತ್ತದೆ.