ನುಹ್, ಹರಿಯಾಣ: ಜಿಲ್ಲೆಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿದ್ದವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ನಿನ್ನೆಯಿಂದ ನಗರದಲ್ಲಿ ಬುಲ್ಡೋಜರ್ ಸದ್ದು ಮಾಡುತ್ತಿದ್ದು, ಇಂದು ಸಹ ಮುಂದುವರಿದಿದೆ. ಜಿಲ್ಲೆಯ ಎಸ್ಕೆಎಮ್ ಸರ್ಕಾರಿ ವೈದ್ಯಕೀಯ ಕಾಲೇಜು ಬಳಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ಹರಿಯಾಣ ಆಡಳಿತ ನೆಲಸಮಗೊಳಿಸಿದೆ. ಈ ಮೂಲಕ ಸಮಾಜಘಾತುಕರಿಗೆ ಎಚ್ಚರಿಕೆ ನೀಡಿದೆ.
ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಈಗ ಆಡಳಿತವು ಅಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿದೆ. ಸಮಾಜಘಾತುಕರ ಕಟ್ಟಡಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಆದೇಶಿಸಿದ್ದಾರೆ. ಇದರ ಅಡಿ ನುಹ್ ಜಿಲ್ಲಾಡಳಿತವು ಅಕ್ರಮ ನಿರ್ಮಾಣದ ವಿರುದ್ಧ ಪ್ರಮುಖ ಕ್ರಮ ಕೈಗೊಂಡಿದೆ ಎಂದು ನುಹ್ ಜಿಲ್ಲಾಧಿಕಾರಿ ಪ್ರಶಾಂತ್ ಪನ್ವಾರ್ ತಿಳಿಸಿದ್ದಾರೆ.
ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಸಮಾಜಘಾತುಕರ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ ಇರಿಸಿದೆ. ಯಾವುದೇ ಸಂದರ್ಭದಲ್ಲೂ ಅವರನ್ನು ಬಿಡುವುದಿಲ್ಲ. ಅಕ್ರಮ ಕಟ್ಟಡಗಳ ವಿರುದ್ಧ ಆಡಳಿತ ಕ್ರಮ ನಡೆಯುತ್ತಿದ್ದು, ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದರು.
’’ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತಿದೆ. ಈ ಅಭಿಯಾನವನ್ನು ಜಿಲ್ಲಾಡಳಿತದಿಂದ ನಿಯಮಿತವಾಗಿ ನಡೆಸಲಾಗುತ್ತಿದೆ. ಯಾವುದೇ ರೀತಿಯ ಅಕ್ರಮವಾಗಿ ಕಟ್ಟಡ ಅಥವಾ ಶೆಡ್ಗಳನ್ನು ನಿರ್ಮಿಸಿದರೆ ಅದನ್ನು ಮುಲಾಜಿಲ್ಲದೇ ನೆಲಸಮಗೊಳಿಸಲಾಗುವುದು. ಜಿಲ್ಲಾಡಳಿತ ಕೂಡ ಸರಿಯಾದ ರೀತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ರಕ್ಷಣೆ ನೀಡುತ್ತದೆ. ಯಾರಿಗೂ ತಪ್ಪು ಆಗದಂತೆ ನೋಡಿಕೊಳ್ಳಲಾಗುತ್ತದೆ‘‘ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಶುಕ್ರವಾರ ನಲ್ಹಾಡ್ ಶಿವ ದೇವಸ್ಥಾನದ ಹಿಂಭಾಗದ ಸುಮಾರು 5 ಎಕರೆ ಅರಣ್ಯ ಭೂಮಿಯನ್ನು ಜನ ಒತ್ತುವರಿ ಮಾಡಿಕೊಂಡಿದ್ದರು. ಈ ಸ್ಥಳವನ್ನು ಸರ್ಕಾರ ಮತ್ತೆ ವಾಪಸ್ ಪಡೆದಿದೆ. ಅದೇ ರೀತಿ ಪುನ್ಹಾನದಲ್ಲಿ 6 ಎಕರೆ ಅರಣ್ಯ ಭೂಮಿಯಲ್ಲಿ ಸರ್ಕಾರ ವಶ ಪಡೆದುಕೊಂಡಿದೆ. ಅಕ್ರಮವಾಗಿ ನಿರ್ಮಿಸಿದ್ದ ಮನೆಯನ್ನು ನೆಲಸಮಗೊಳಿಸಲಾಗುತ್ತಿದೆ. ನಗೀನಾದ ಎಂಸಿ ಪ್ರದೇಶದಲ್ಲಿ ಬರುವ ಧೋಬಿ ಘಾಟ್‌ನಲ್ಲಿ ಸುಮಾರು ಒಂದು ಎಕರೆ ಭೂಮಿಯಲ್ಲಿ ನಿರ್ಮಿಸಿದ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಅದೇ ರೀತಿ ನಂಗಲ್ ಮುಬಾರಿಕಪುರದಲ್ಲಿ 2 ಎಕರೆ ಜಾಗದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್ ಹಾಗೂ ಅಲ್ಲಿ ನಿರ್ಮಿಸಿದ್ದ ಅಕ್ರಮ ಒತ್ತುವರಿ ತೆರವು ಮಾಡಲಾಯಿತು. ಇಂದು ಸಹ ಜಿಲ್ಲೆಯ ನಾನಾ ಕಡೆ ಅಕ್ರಮ ತೆರುವು ಕಾರ್ಯಾಚರಣೆ ನಡೆಯುತ್ತಿದ್ದು, ಈ ಮೂಲಕ ಸಮಾಜಘಾತುಕರಿಗೆ ಬಿಸಿ ಮುಟ್ಟಿಸಲಾಗುತ್ತಿದೆ.
ಓದಿ:ಹರಿಯಾಣ ಹಿಂಸಾಚಾರ: ನುಹ್ ಎಸ್ಪಿ ವರುಣ್ ಸಿಂಗ್ಲಾ ವರ್ಗಾವಣೆ: ನೂತನ SP ಆಗಿ ನರೇಂದರ್ ಬಿಜರ್ನಿಯಾ ನೇಮಕ