ಕೋಟ್‌ದ್ವಾರ (ಉತ್ತರಾಖಂಡ್): ಭಾರತದ ಮೊದಲ ರಕ್ಷಣಾ ಸಿಬ್ಬಂದಿ (ಸಿಡಿಎಸ್)ಯ ಮುಖ್ಯಸ್ಥರಾಗಿದ್ದ ದಿವಂಗತ ಬಿಪಿನ್ ರಾವತ್ ಅವರ ಸ್ವಗ್ರಾಮವನ್ನು ಮಹಾರಾಷ್ಟ್ರದ ಲಾತೂರ್ ಮೂಲದ 'ಹರಿವಂಶ ರಾಯ್ ಬಚ್ಚನ್ ಪ್ರಬೋಧನ್ ಪ್ರತಿಷ್ಠಾನ' ಎಂಬ ಎನ್‌ಜಿಒ ದತ್ತು ತೆಗೆದುಕೊಂಡಿದೆ. ಉತ್ತರಾಖಂಡ್ನ ಪೌರಿ-ಗಢವಾಲ್ ಜಿಲ್ಲೆಯಲ್ಲಿರುವ ರಾವತ್ ಅವರ ಬಿರ್ಮೋಲಿ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿರುವುದಾಗಿ ಹೇಳಿರುವ ಪ್ರತಿಷ್ಠಾನದ ಪ್ರತಿನಿಧಿಗಳು, ಬಿರ್ಮೋಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿರ್ಮೋಲಿ, ಸಾಯಿನ್ ಮತ್ತು ಮಾಥರ ಗ್ರಾಮಗಳನ್ನೂ ದತ್ತು ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಬಿರ್ಮೋಲಿ ಗ್ರಾಮಕ್ಕೆ ಪ್ರತಿಷ್ಠಾನದ ಪ್ರತಿನಿಧಿಗಳು ಭೇಟಿ ಕೊಟ್ಟು ಅಲ್ಲಿನ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಆಡಳಿತಾಧಿಕಾರಿಗಳು, ಗ್ರಾಮದ ಮುಖಂಡರು ಮತ್ತು ಇತರ ಸರ್ಕಾರಿ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು. ಅಲ್ಲದೇ, ಕಳೆದ ವರ್ಷ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಗ್ರಾಮದ ದತ್ತು ಪಡೆಯುವ ಉದ್ದೇಶವನ್ನು ಗ್ರಾಮಸ್ಥರಿಗೆ ವಿವರಿಸಿದರು. ಗ್ರಾಮವನ್ನು ಅಭಿವೃದ್ಧಿಪಡಿಸುವ ಮತ್ತು ಗ್ರಾಮದಿಂದ ಬೇರೆಡೆ ಸ್ಥಳಾಂತರಗೊಂಡ ಗ್ರಾಮಸ್ಥರನ್ನು ಮರಳಿ ತಮ್ಮೂರಿಗೆ ಕರೆತರುವ ಇಚ್ಛೆಯನ್ನು ಗ್ರಾಮಸ್ಥರು ಪ್ರಸ್ತಾಪಿಸಿದರು.