ಮಲಪ್ಪುರಂ (ಕೇರಳ):ಬುಧವಾರ ನಡೆದ ಡ್ರಾ ನಂತರ ಕೇರಳ ಲಾಟರಿ ಇಲಾಖೆಯು 10 ಕೋಟಿ ರೂಪಾಯಿಗಳ ಮಾನ್ಸೂನ್ ಬಂಪರ್ ವಿಜೇತರನ್ನು ಘೋಷಿಸಿತು. ಈ ಬಾರಿ ಪ್ರಥಮ ಬಹುಮಾನ ಗೆದ್ದಿರುವುದು ಒಬ್ಬರಲ್ಲ, ಒಂದು ಗುಂಪು. ಮಲಪ್ಪುರಂ ಜಿಲ್ಲೆಯ ಪರಪ್ಪನಂಗಡಿ ನಗರಸಭೆಯ 11 ಮಂದಿ ಮಹಿಳಾ ಪೌರ ಕಾರ್ಮಿಕರಿಗೆ ಹಣದ ಹೊಳೆಯೇ ಹರಿದುಬಂದಿದೆ.
ಹರಿತ ಕರ್ಮ ಸೇನೆಯ ಕಾರ್ಯಕರ್ತರು ಒಟ್ಟಾಗಿ ಹಣ ಸಂಗ್ರಹಿಸುವ ಮೂಲಕ ಮಾನ್ಸೂನ್ ಲಾಟರಿ ಬಂಪರ್ ಟಿಕೆಟ್ ಖರೀದಿಸಿದ್ದರು. ಒಬ್ಬೊಬ್ಬರು ತಲಾ 25 ರೂ. ಷೇರು ಹಾಕಿ ಟಿಕೆಟ್ ಖರೀದಿಸಿದ್ದರು. ಕುಟ್ಟಿಮಾಲು, ಬೇಬಿ, ಶೋಭಾ, ಪಾರ್ವತಿ, ರಾಧಾ, ಲಕ್ಷ್ಮಿ, ಲೀಲಾ, ಬಿಂದು, ಶೀಜಾ, ಚಂದ್ರಿಕಾ ಮತ್ತು ಕಾರ್ತ್ಯಾಯನಿ ಮಾನ್ಸೂನ್ ಬಂಪರ್ ಪ್ರಥಮ ಬಹುಮಾನ ಪಡೆದವರು.
MB 200261 ನಂಬರ್ನ ಟಿಕೆಟ್‌ಗೆ ಮೊದಲ ಬಹುಮಾನ 10 ಕೋಟಿ ರೂ ಲಭಿಸಿದೆ. ಪಾಲಕ್ಕಾಡ್ ನ್ಯೂ ಸ್ಟಾರ್ ಲಾಟರಿ ಪ್ರಥಮ ಬಹುಮಾನದ ಟಿಕೆಟ್ ಮಾರಾಟ ಮಾಡಿದೆ. ಮಲಪ್ಪುರಂನ ಕುಟ್ಟಿಪುರಂನಲ್ಲಿ ಮಣಿ ಎಂಬ ಏಜೆಂಟ್ ಮೂಲಕ ಟಿಕೆಟ್ ಮಾರಾಟ ಮಾಡಲಾಗಿತ್ತು.
ಬುಧವಾರ ಮಧ್ಯಾಹ್ನ 2 ಗಂಟೆಗೆ ತಿರುವನಂತಪುರಂನ ಗೋರ್ಖಿ ಭವನದಲ್ಲಿ ಮಾನ್ಸೂನ್ ಬಂಪರ್ ಲಾಟರಿಯ ಡ್ರಾ ನಡೆಯಿತು. ಈ ಲಾಟರಿಯ ಟಿಕೆಟ್ ದರ 250 ರೂಪಾಯಿ ಆಗಿತ್ತು. ದ್ವಿತೀಯ ಬಹುಮಾನ 5 ಜನರಿಗೆ ಲಭಿಸಿದ್ದು 10 ಲಕ್ಷ ರೂ. ಬಹುಮಾನ ಗಳಿಸಿದ್ದಾರೆ. MA 475211, MB 219556, MC 271281, MD 348108 ಮತ್ತು ME 625250 ಟಿಕೆಟ್ ಸಂಖ್ಯೆಗಳಿಗೆ ದ್ವಿತೀಯ ಬಹುಮಾನ ಸಿಕ್ಕಿದೆ. 25 ಮಂದಿ ತೃತೀಯ ಬಹುಮಾನವಾಗಿ ತಲಾ 5 ಲಕ್ಷ ರೂ. ಮತ್ತು ನಾಲ್ಕನೇ ಬಹುಮಾನ ಪಡೆದ ಐದು ಜನರಿಗೆ ತಲಾ 3 ಲಕ್ಷ ರೂ. ನೀಡಲಾಗಿದೆ.
ಇದನ್ನೂ ಓದಿ :ಕೇರಳ ಬಂಪರ್ ಲಾಟರಿ: ಮಲಪ್ಪುರಂನಲ್ಲಿ ಮಾರಾಟವಾದ ಟಿಕೆಟ್‌ಗೆ 12ಕೋಟಿ ಬಹುಮಾನ!
ಲಾಟರಿ ಗೆದ್ದವರ ಸಂತಸ: ಈ ಕುರಿತು ಮಾಧ್ಯಮದೊಂದಿಗೆ ಸಂತಸ ಹಂಚಿಕೊಂಡ ಪ್ರಥಮ ಬಹುಮಾನ ಗೆದ್ದ ಗುಂಪಿನ ಸದಸ್ಯೆ ರಾಧಾ, "ನಾವು ಮೊದಲು ಹಣವನ್ನು ಒಟ್ಟುಗೂಡಿಸಿ ಲಾಟರಿ ಟಿಕೆಟ್‌ಗಳನ್ನು ಖರೀದಿಸಿದ್ದೆವು. ನಾವು ಇದೇ ಮೊದಲ ಬಾರಿಗೆ ಮೆಗಾ ಬಹುಮಾನ ಗೆದ್ದಿದ್ದೇವೆ. ಕೊನೆಗೂ ನಮಗೆ ಜಾಕ್‌ಪಾಟ್ ಹೊಡೆಯಿತು ಎಂದು ತಿಳಿದಾಗ ಉತ್ಸಾಹ ಮತ್ತು ಸಂತೋಷಕ್ಕೆ ಮಿತಿಯೇ ಇರಲಿಲ್ಲ. ನಾವೆಲ್ಲರೂ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ. ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಈ ಹಣವು ಉಪಕಾರಿಯಾಗಲಿದೆ" ಎಂದು ನಿಟ್ಟುಸಿರುಬಿಟ್ಟರು.
ನಗರಸಭೆಯ ಹರಿತ ಕರ್ಮ ಸೇನೆ ಒಕ್ಕೂಟದ ಅಧ್ಯಕ್ಷೆ ಶೀಜಾ ಮಾತನಾಡಿ, "ಈ ಬಾರಿ ಅತ್ಯಂತ ಅರ್ಹರಿಗೆ ಅದೃಷ್ಟ ಒಲಿದು ಬಂದಿದೆ. ಎಲ್ಲ ವಿಜೇತರು ತುಂಬಾ ಶ್ರಮಜೀವಿಗಳು. ಅವರ ಕುಟುಂಬಗಳಿಗೆ ಈ ಹಣ ಪ್ರಯೋಜನವಾಗಲಿದೆ" ಎಂದು ಹೇಳಿದರು. ಬಂಪರ್ ಲಾಟರಿ ವಿಜೇತರನ್ನು ಭೇಟಿ ಮಾಡಿ ಅಭಿನಂದಿಸಲು ಇಲ್ಲಿನ ಪಾಲಿಕೆ ಗೋದಾಮು ಆವರಣಕ್ಕೆ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.