ಅಹಮದಾಬಾದ್(ಗುಜರಾತ್): ಗುಜರಾತ್ ಕಾಂಗ್ರೆಸ್ನಲ್ಲಿ ಉಂಟಾಗಿರುವ ಆಂತರಿಕ ಕಲಹದಿಂದ ಬೇಸತ್ತು ಪಕ್ಷ ತೊರೆದಿರುವ ಪ್ರಭಾವಿ ಯುವ ನಾಯಕ ಹಾರ್ದಿಕ್ ಪಟೇಲ್, ಟ್ವೀಟ್ ಮೂಲಕ ಪಕ್ಷದ ಮುಖಂಡರೊಬ್ಬರ ವಿರುದ್ಧ ಹರಿಹಾಯ್ದಿದ್ದಾರೆ. ಈ ವೇಳೆ, ಭಗವಾನ್ ಶ್ರೀರಾಮನ ವಿರುದ್ಧ ನಿಮಗೆ ಯಾವ ಕಾರಣಕ್ಕಾಗಿ ದ್ವೇಷವಿದೆ? ಹಿಂದೂಗಳನ್ನ ಇಷ್ಟೊಂದು ದ್ವೇಷಿಸುವುದೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಅಯೋಧ್ಯೆ ರಾಮಮಂದಿರ ವಿಚಾರವಾಗಿ ಖಾರವಾಗಿ ಮಾತನಾಡಿದ್ದ ಕೇಂದ್ರದ ಮಾಜಿ ಸಚಿವ ಭರತಸಿಂಹ ಸೋಲಂಕಿ, ರಾಮಮಂದಿರದ ಇಟ್ಟಿಗೆಗಳ ಮೇಲೆ ನಾಯಿಗಳು ಮೂತ್ರ ವಿಸರ್ಜನೆ ಮಾಡುತ್ತವೆ ಎಂಬ ವಿವಾದಿತ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಪಟೇಲ್ ಸಮುದಾಯದ ಪ್ರಭಾವಿ ನಾಯಕ ಹಾರ್ದಿಕ್ ಪಟೇಲ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಹಾರ್ದಿಕ್ ಪಟೇಲ್ ಟ್ವೀಟ್: ಕಾಂಗ್ರೆಸ್ ಪಕ್ಷದ ಮುಖಂಡರ ಬಳಿ ನಾನು ಕೇಳಲು ಬಯಸುತ್ತೇನೆ. ಭಗವಾನ್ ಶ್ರೀರಾಮನೊಂದಿಗೆ ನಿಮಗೆ ಯಾವ ದ್ವೇಷವಿದೆ? ಹಿಂದೂಗಳನ್ನ ಇಷ್ಟೊಂದು ದ್ವೇಷಿಸುವುದೇಕೆ? ಶತಮಾನಗಳ ನಂತರ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ದೇಗುಲ ನಿರ್ಮಾಣ ಮಾಡಲಾಗ್ತಿದೆ. ಆದರೂ, ಕಾಂಗ್ರೆಸ್ ಮುಖಂಡರು ಶ್ರೀರಾಮನ ವಿರುದ್ಧ ಹೇಳಿಕೆ ನೀಡುತ್ತಲೇ ಇದ್ದಾರೆ.
ಕಾಂಗ್ರೆಸ್ ಪಕ್ಷ ದೇಶದಲ್ಲಿ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡ್ತಿದೆ. ಹಿಂದೂ ಧರ್ಮದ ನಂಬಿಕೆಗಳಿಗೆ ಕಾಂಗ್ರೆಸ್ ಧಕ್ಕೆ ತರುತ್ತಿದೆ ಎಂದು ಈ ಹಿಂದೆ ನಾನು ಹೇಳಿದ್ದೆ. ರಾಮ ಮಂದಿರದ ಇಟ್ಟಿಗೆ ಮೇಲೆ ನಾಯಿ ಮೂತ್ರ ಮಾಡುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಗುಜರಾತ್ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.