ಅಹಮದಾಬಾದ್ (ಗುಜರಾತ್) : ಹತ್ತು ದಿನಗಳ ಹಿಂದೆಷ್ಟೇ ಕಾಂಗ್ರೆಸ್ನಿಂದ ಹೊರ ಬಂದಿರುವ ಗುಜರಾತ್ನ ಯುವ ಹೋರಾಟಗಾರ, ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್) ಸಂಚಾಲಕ ಹಾರ್ದಿಕ್ ಪಟೇಲ್ ಬಿಜೆಪಿ ಸೇರಲು ಮುಂದಾಗಿದ್ದಾರೆ. ಗಾಂಧಿನಗರದಲ್ಲಿ ಮೇ 30 ಅಥವಾ ಮೇ 31ರಂದು ಕಮಲ ಪಕ್ಷದ ಬಾವುಟ ಹಿಡಿಯುವ ಸಾಧ್ಯತೆ ಇದ್ದು, ಈ ಬಗ್ಗೆ ಅವರೇ ಸುಳಿವು ನೀಡಿದ್ದಾರೆ. ಅಷ್ಟೇ ಅಲ್ಲ, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವನ್ನೂ ಕೂಡ ಕೊಟ್ಟಿದ್ದಾರೆ.
ಗುಜರಾತ್ ಕಾಂಗ್ರೆಸ್ನ ಕಾರ್ಯಾಧ್ಯಕ್ಷರಾಗಿದ್ದ ಹಾರ್ದಿಕ್ ಪಟೇಲ್ ಮೇ 18ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳು ಎದ್ದಿದ್ದವು. ಇದೀಗ ಟಿವಿ ವಾಹಿನಿಯೊಂದರ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಅವರು, ಬಿಜೆಪಿಗೆ ಸೇರುವ ಸುಳಿವು ನೀಡಿದ್ದಾರೆ. ಜೊತೆಗೆ ಸೋಮನಾಥ ದೇಗುಲದಿಂದ ಏಕತಾ ಪ್ರತಿಮೆಯವರೆಗೆ ಏಕತಾ ಯಾತ್ರೆಯನ್ನು ನಡೆಸಲಿದ್ದೇನೆ ಎಂದು ಹೇಳಿದ್ದಾರೆ.