ಅಹಮದಾಬಾದ್(ಗುಜರಾತ್):ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದಿರುವ ಗುಜರಾತ್ ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಇಂದು ಬಿಜೆಪಿ ಸೇರ್ಪಡೆಯಾಗುವುದು ಖಚಿತವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಘೋಷಣೆ ಮಾಡಿರುವ ಅವರು, ನರೇಂದ್ರ ಮೋದಿ ನಾಯಕತ್ವದ ಭಗೀರಥ ಕಾರ್ಯಕ್ಕೆ ಸಣ್ಣ ಯೋಧನಾಗಿ ಕೆಲಸ ಮಾಡುತ್ತೇನೆಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಸೇರ್ಪಡೆಯಾಗಲಿರುವ ಹಾರ್ದಿಕ್ ಪಟೇಲ್ ಹಾರ್ದಿಕ್ ಪಟೇಲ್ ಟ್ವೀಟ್: 'ರಾಷ್ಟ್ರದ ಹಿತ, ದೇಶದ ಹಿತ, ಜನಹಿತ ಹಾಗೂ ಸಮಾಜದ ಹಿತದೃಷ್ಟಿಯಿಂದ ಇಂದಿನಿಂದ ಹೊಸದಿಂದ ಅಧ್ಯಾಯ ಆರಂಭಿಸುತ್ತಿದ್ದೇನೆ. ಭಾರತದ ಯಶಸ್ವಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಭಾಯ್ ಮೋದಿ ಜೀ ಅವರ ನೇತೃತ್ವದಲ್ಲಿ ನಡೆಯುತ್ತಿರುವ ರಾಷ್ಟ್ರ ಸೇವೆಯ ಭಗೀರಥ ಕಾರ್ಯದಲ್ಲಿ ಓರ್ವ ಸಣ್ಣ ಯೋಧನಂತೆ ಕೆಲಸ ಮಾಡಿಕೊಂಡು ಹೋಗುವೆ' ಎಂದು ತಿಳಿಸಿದ್ದಾರೆ. ಭಾರತೀಯ ಜನತಾ ಪಾರ್ಟಿ ಸೇರ್ಪಡೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ತಮ್ಮ ಅಹಮದಾಬಾದ್ ನಿವಾಸದಲ್ಲಿ ಹಾರ್ದಿಕ್ ಪಟೇಲ್ ವಿಶೇಷ ಪೂಜೆ ಸಲ್ಲಿಸಿದ್ದಾರೆ.
2017ರಿಂದಲೂ ಪಾಟೀದಾರ್ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದ ಹಾರ್ದಿಕ್ ಪಟೇಲ್ 2019ರ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದಾದ ಬಳಿಕ 2020ರಲ್ಲಿ ಗುಜರಾತ್ ಪ್ರದೇಶ ಕಾಂಗ್ರೆಸ್ನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿನ ಅರಾಜಕತೆ ಹಾಗೂ ವೈಮನಸ್ಸಿನಿಂದಾಗಿ ಅವರು ಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು.
ಇದನ್ನೂ ಓದಿ:ರೈಲಿನಿಂದ ಇಳಿಯುವ ಅವಸರ.. ಜಾರಿಬಿದ್ದ ವ್ಯಕ್ತಿ ಪಾಲಿಗೆ ದೇವರಾದ ಆರ್ಪಿಎಫ್ ಅಧಿಕಾರಿ
ಕಾಂಗ್ರೆಸ್ ಪಕ್ಷದಿಂದ ಹೊರಬಂದ ಬಳಿಕ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಹಾರ್ದಿಕ್ ಪಟೇಲ್, ಕಳೆದ ಎರಡು ದಿನಗಳ ಹಿಂದೆ ಭಗವಾನ್ ಶ್ರೀರಾಮನ ವಿರುದ್ಧ ನಿಮಗೆ ಯಾವ ಕಾರಣಕ್ಕಾಗಿ ದ್ವೇಷವಿದೆ? ಹಿಂದೂಗಳನ್ನ ಇಷ್ಟೊಂದು ದ್ವೇಷಿಸುವುದೇಕೆ? ಎಂದು ಟ್ವೀಟ್ ಮಾಡಿ ಕೆಂಡಕಾರಿದ್ದರು. ಶತಮಾನಗಳ ನಂತರ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ದೇಗುಲ ನಿರ್ಮಾಣ ಮಾಡಲಾಗ್ತಿದೆ. ಆದರೂ, ಕಾಂಗ್ರೆಸ್ ಮುಖಂಡರು ಶ್ರೀರಾಮನ ವಿರುದ್ಧ ಹೇಳಿಕೆ ನೀಡುತ್ತಲೇ ಇದ್ದಾರೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡ್ತಿದೆ. ಹಿಂದೂ ಧರ್ಮದ ನಂಬಿಕೆಗಳಿಗೆ ಕಾಂಗ್ರೆಸ್ ಧಕ್ಕೆ ತರುತ್ತಿದೆ ಎಂದು ಈ ಹಿಂದೆ ನಾನು ಹೇಳಿದ್ದೆ. ರಾಮ ಮಂದಿರದ ಇಟ್ಟಿಗೆ ಮೇಲೆ ನಾಯಿ ಮೂತ್ರ ಮಾಡುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಗುಜರಾತ್ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು.