ನವದೆಹಲಿ: ಕೋವಿಡ್ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ಮೋದಿ ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡದಿರುವ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ, ಆ ರಾಜ್ಯಗಳು ತೆರಿಗೆ ಕಡಿಮೆ ಮಾಡಬೇಕೆಂದು ಒತ್ತಾಯಿಸಿದ್ದರು. ಈ ಸಭೆಯಲ್ಲಿ ಎಲ್ಲ ರಾಜ್ಯಗಳ ಸಿಎಂಗಳು ಭಾಗಿಯಾಗಿದ್ದರು. ಸಭೆಯ ನಂತರ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಮಹಾರಾಷ್ಟ್ರ ಸರ್ಕಾರ ಕೆಲವೊಂದು ಮಾಹಿತಿಯನ್ನು ಹೊರಹಾಕಿದ್ದು, ಮೋದಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿತ್ತು.
ಕೇಂದ್ರವು ಮಹಾರಾಷ್ಟ್ರಕ್ಕೆ 26,500 ಕೋಟಿ ಬಾಕಿ ಉಳಿಸಿಕೊಂಡಿದ್ದು, ಮಹಾರಾಷ್ಟ್ರಕ್ಕೆ ಮಲತಾಯಿ ಧೋರಣೆಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದು ಆರೋಪಿಸಿದ್ದು, ಮಾತ್ರವಲ್ಲದೇ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಮಹಾರಾಷ್ಟ್ರದಲ್ಲಿರುವ ಮಹಾ ವಿಕಾಸ್ ಅಘಾಡಿ ಸರ್ಕಾರ (ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್) ಕಾರಣವಲ್ಲ ಎಂದು ಉಲ್ಲೇಖಿಸಲಾಗಿತ್ತು. ಈ ಹೇಳಿಕೆ ಕುರಿತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾದ ಹರದೀಪ್ ಸಿಂಗ್ ಪುರಿ ಪ್ರತಿಕ್ರಿಯೆ ನೀಡಿದ್ದು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ಇಂಧನ ತೆರಿಗೆಯಾಗಿ 79,000 ಕೋಟಿ ರೂಪಾಯಿ ಸಂಗ್ರಹಿಸಿದೆ. ಈ ವರ್ಷ 33,000 ಕೋಟಿ ರೂಪಾಯಿ ಸಂಗ್ರಹಿಸುವ ಸಾಧ್ಯತೆಯಿದೆ ಎಂದು ಹರದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಜನರಿಗೆ ಪರಿಹಾರ ನೀಡಲು ಪೆಟ್ರೋಲ್ ಮತ್ತು ಇಂಧನದ ಮೇಲಿನ ವ್ಯಾಟ್ ಅನ್ನು ಏಕೆ ಕಡಿಮೆ ಮಾಡಲಿಲ್ಲ ಎಂದು ಹರದೀಪ್ ಸಿಂಗ್ ಪುರಿ ಪ್ರಶ್ನಿಸಿದ್ದಾರೆ. ಸತ್ಯವು ನೋವುಂಟು ಮಾಡುತ್ತದೆ, ಆದರೆ ಸತ್ಯಗಳು ಸ್ವತಃ ಮಾತನಾಡುತ್ತವೆ ಎಂದು ಅವರು ಉಲ್ಲೇಖಿಸಿದ್ದಾರೆ.
ಬಿಜೆಪಿ ಹೊರತುಪಡಿಸಿ ಆಡಳಿತವಿರುವ ರಾಜ್ಯಗಳು ಇಂಧನದ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದರೆ ಪೆಟ್ರೋಲ್ ಅಗ್ಗವಾಗಲಿದೆ ಎಂದು ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಪೆಟ್ರೋಲ್ ಮೇಲೆ ಒಂದು ಲೀಟರ್ಗೆ 32.15 ರೂಪಾಯಿ, ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ 29.10 ರೂಪಾಯಿ ತೆರಿಗೆ ವಿಧಿಸುತ್ತಿವೆ. ಆದರೆ, ಬಿಜೆಪಿ ಆಡಳಿತದ ಉತ್ತರಾಖಂಡದಲ್ಲಿ ಪೆಟ್ರೋಲ್ ಮೇಲೆ ರಾಜ್ಯದ ತೆರಿಗೆ ಕೇವಲ 14.51 ರೂಪಾಯಿ ಮತ್ತು ಉತ್ತರ ಪ್ರದೇಶದಲ್ಲಿ 16.50 ರೂಪಾಯಿ ವಿಧಿಸಲಾಗುತ್ತದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪೆಟ್ರೋಲ್ - ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಿ: ರಾಜ್ಯಗಳಿಗೆ ಪ್ರಧಾನಿ ಒತ್ತಾಯ