ಅಮೃತಸರ (ಪಂಜಾಬ್):ಇತ್ತೀಚಿನ ದಿನಗಳಲ್ಲಿವಿಮಾನದಲ್ಲಿ ಪ್ರಯಾಣಿಕರ ಅಶಿಸ್ತಿನ ವರ್ತನೆಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ದುಬೈನಿಂದ ಅಮೃತಸರಕ್ಕೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದು, ಆತನನ್ನು ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಜಲಂಧರ್‌ನ ಕೋಟ್ಲಿ ಗ್ರಾಮದ ನಿವಾಸಿ ರಾಜಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಇಂಡಿಗೋ ಸೆಕ್ಯೂರಿಟಿ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ರಾಜಸಾನ್ಸಿ ಠಾಣೆಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ದುಬೈನಿಂದ ಅಮೃತಸರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ಸಂಖ್ಯೆ 6E 1428ರಲ್ಲಿ ಘಟನೆ ನಡೆದಿದೆ. ಆರೋಪಿ ಪ್ರಯಾಣದ ವೇಳೆ ವಿಮಾನದಲ್ಲಿ ಮದ್ಯ ಸೇವಿಸಲು ಆರಂಭಿಸಿದ್ದ. ಅತಿಯಾದ ಮದ್ಯ ಸೇವನೆಯ ಅಮಲಲ್ಲಿದ್ದ ಆತ ಏರ್‌ಲೈನ್ಸ್‌ನ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿ ಗಲಾಟೆ ಮಾಡಿದ್ದಾನೆ ಎಂದು ಇಂಡಿಗೋ ಏರ್‌ಲೈನ್ಸ್ ಅಸಿಸ್ಟೆಂಟ್ ಸೆಕ್ಯುರಿಟಿ ಮ್ಯಾನೇಜರ್ ಅಜಯ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 354 ಮತ್ತು 509 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ವಿಮಾನದಲ್ಲಿ ನಡೆದ ಇತ್ತೀಚಿನ ಪ್ರಕರಣಳು:
- ಏ.1ರಂದು ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಪ್ರಯಾಣಿಸುತ್ತಿದ್ದ ಸ್ವೀಡನ್ ಪ್ರಯಾಣಿಕನೊಬ್ಬ ಕ್ಯಾಬಿನ್ ಸಿಬ್ಬಂದಿಗೆ ಕಿರುಕುಳ ನೀಡಿದ್ದ ಆರೋಪದಡಿ ಬಂಧಿಸಲಾಗಿತ್ತು. 63 ವರ್ಷದ ಸ್ವೀಡನ್ ಪ್ರಜೆ ಎರಿಕ್ ಹೆರಾಲ್ಡ್ ಜೊನಾಸ್ ವೆಸ್ಟ್‌ಬರ್ಗ್ ಇಂಡಿಗೋ ವಿಮಾನದಲ್ಲಿ ಮುಂಬೈಗೆ ಪ್ರಯಾಣಿಸುತ್ತಿದ್ದ. ಕುಡಿದ ಮತ್ತಿನಲ್ಲಿ ವೆಸ್ಟ್‌ಬರ್ಗ್ ಕ್ಯಾಬಿನ್ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದನು. ವಿಮಾನ ಮುಂಬೈ ತಲುಪಿದ ಬಳಿಕ ಎರಿಕ್ನನ್ನು ಪೊಲೀಸರು ಬಂಧಿಸಿದ್ದರು.
- ಮಾ.23ರಂದು ನಡೆದಿದ್ದ ಘಟನೆಯೊಂದರಲ್ಲಿ ದುಬೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರಿಬ್ಬರು ಕುಡಿದು ಮತ್ತಿನಲ್ಲಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರೊಂದಿಗೆ ಅಶಿಸ್ತಿನಿಂದ ವರ್ತಸಿದ್ದರು. ವಿಮಾನಯಾನದ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
- ಮಾ.5ರಂದು ನಡೆದ ಮತ್ತೊಂದು ಘಟನೆಯಲ್ಲಿ ನ್ಯೂಯಾರ್ಕ್‌ನಿಂದ ನವದೆಹಲಿಗೆ ಬರುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ ಸಹಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಎಎ292 ಸಂಖ್ಯೆಯ ವಿಮಾನದಲ್ಲಿ ಘಟನೆ ನಡೆದಿತ್ತು.
- ಜ.5ರಂದು ನಡೆದ ಘಟನೆಯಲ್ಲಿ ವಿಮಾನ ಪ್ರಯಾಣದ ವೇಳೆ ಮಹಿಳೆಯ ಮೇಲೆ ಕುಡಿದ ನಶೆಯಲ್ಲಿದ್ದ ಪ್ರಯಾಣಿಕನೋರ್ವ ಮೂತ್ರ ವಿಸರ್ಜನೆ ಮಾಡಿದ್ದ. ಪ್ಯಾರಿಸ್ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ-142ರಲ್ಲಿ ಕುಡಿದ ಮತ್ತಿನಲ್ಲಿದ್ದ ಪುರುಷ ಪ್ರಯಾಣಿಕನು ಮಹಿಳಾ ಪ್ರಯಾಣಿಕರೊಬ್ಬರ ಹೊದಿಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ವಿಷಯವನ್ನು ವಿಮಾನದ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ ವರದಿ ಮಾಡಿದ್ದರು. ಇದರ ನಂತರ ಆರೋಪಿಯನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ:ಕುಡಿದ ನಶೆಯಲ್ಲಿ ಇಂಡಿಗೋ ವಿಮಾನದ ತುರ್ತು ಬಾಗಿಲು ತೆರೆಯಲೆತ್ನಿಸಿದ ಪ್ರಯಾಣಿಕ: ಬಂಧನ