ಡೆಹ್ರಾಡೂನ್:ಉತ್ತರಾಖಂಡದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಸಂಪುಟ ಸಚಿವ ಹರಕ್ ಸಿಂಗ್ ರಾವತ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
'ಈಟಿವಿ ಭಾರತ'ದೊಂದಿಗಿನ ಸಂವಾದದಲ್ಲಿ ಹರಕ್ ಸಿಂಗ್ ರಾವತ್ ಇದನ್ನು ಖಚಿತಪಡಿಸಿದ್ದಾರೆ. ಅದೇ ಸಮಯದಲ್ಲಿ, 'ಈಟಿವಿ ಭಾರತ' ಜೊತೆಗಿನ ಸಂವಾದದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ಕೌಶಿಕ್ ಅವರು ಮಾತನಾಡಿದ್ದು, ಹರಕ್ ಸಿಂಗ್ ರಾವತ್ ರಾಜೀನಾಮೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಕೋಟ್ ದ್ವಾರದ ಮೆಡಿಕಲ್ ಕಾಲೇಜು ಸ್ಥಾಪನೆ ಹರಕ್ ಸಿಂಗ್ ರಾವತ್ ಅವರ ಬಹುದಿನಗಳ ಬೇಡಿಕೆಯಾಗಿತ್ತು. ಹಾಗಾಗಿ ಕೋಟ್ ದ್ವಾರದಲ್ಲಿ ಮೆಡಿಕಲ್ ಕಾಲೇಜು ಮಂಜೂರಾತಿಗಾಗಿ ಮನವಿ ಮಾಡುತ್ತಿದ್ದರು. ಹಲವು ಬಾರಿ ಸರ್ಕಾರದ ಮುಂದೆ ಈ ವಿಚಾರ ಎತ್ತಿದ್ದರು. ಆದರೆ ಅವರ ಬೇಡಿಕೆಯನ್ನು ಈಡೇರಿಸಲಾಗಿಲ್ಲ. ಹೀಗಾಗಿ ಅವರು ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ.
ಮೂಲಗಳ ಪ್ರಕಾರ ಹರಕ್ ಸಿಂಗ್ ರಾವತ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ದೆಹಲಿಯಲ್ಲಿ ಹರೀಶ್ ರಾವತ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಹರಕ್ ಸಿಂಗ್ ರಾವತ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಖ್ಯವಾಗಿ ಹರೀಶ್ ರಾವತ್ ಮತ್ತು ಹರಕ್ ಸಿಂಗ್ ರಾವತ್ ಇಬ್ಬರೂ ಹಿಂದಿನ ದಿನ ದೆಹಲಿಯಲ್ಲಿದ್ದರು. ಇದೇ ವೇಳೆ ಸಂಪುಟ ಸಚಿವ ಹರಕ್ ಸಿಂಗ್ ರಾವತ್ ರಾಜೀನಾಮೆಯಿಂದ ಬಿಜೆಪಿಯಲ್ಲಿ ಬಿರುಗಾಳಿ ಎದ್ದಿದೆ. ಆದರೆ, ಹರಕ್ ಸಿಂಗ್ ರಾವತ್ ಲಿಖಿತವಾಗಿ ಯಾವುದೇ ರಾಜೀನಾಮೆ ನೀಡಿಲ್ಲ. ಈ ಹಿಂದೆಯೂ ಹರಕ್ ಸಿಂಗ್ ರಾವತ್ ಬಿಜೆಪಿಗೆ ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹಗಳಿದ್ದವು. ಆದರೆ ಅವರು ವರದಿಗಳನ್ನು ತಳ್ಳಿ ಹಾಕಿದ್ದರು.
2016ರಲ್ಲಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಂಡಾಯವೆದ್ದು ಹರಕ್ ಸಿಂಗ್ ಬಿಜೆಪಿ ಸೇರಿದ್ದರು. ಹರೀಶ್ ರಾವತ್ ಸಿಎಂ ಆಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದ 10 ಶಾಸಕರಲ್ಲಿ ಅವರೂ ಒಬ್ಬರು. ಹರಕ್ ಅವರು 2007 ರಿಂದ 2012 ರವರೆಗೆ ಪ್ರತಿಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಥಾವರ್ ಚಂದ್ ಗೆಹ್ಲೋಟ್ರನ್ನು ಭೇಟಿ ಮಾಡಿದ ಕೇರಳ ರಾಜ್ಯಪಾಲ