ಲಕ್ನೋ (ಉತ್ತರ ಪ್ರದೇಶ) :ರಾಜಧಾನಿ ಲಕ್ನೋದಲ್ಲಿ ಭದ್ರತೆಯನ್ನು ಹೆಚ್ಚಿಸಲು ಲಕ್ನೋ ಪೊಲೀಸರು 'ಹರ್ ಘರ್ ಕ್ಯಾಮೆರಾ' (ಪ್ರತಿ ಮನೆಯಲ್ಲೂ ಸಿಸಿಟಿವಿ) ಎಂಬ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಇದರ ಅಡಿಯಲ್ಲಿ ಪೊಲೀಸ್ ಅಧಿಕಾರಿಗಳು ಪ್ರತಿ ಪ್ರದೇಶಕ್ಕೂ ಭೇಟಿ ನೀಡುತ್ತಾರೆ ಮತ್ತು ಪ್ರತಿ ಮನೆಯ ಹೊರಗೆ ಕನಿಷ್ಠ ಒಂದು ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಜನರಿಗೆ ಮನವಿ ಮಾಡಲಿದ್ದಾರೆ. ಒಂದು ಬಡಾವಣೆಯ ಎಲ್ಲ ಪ್ರದೇಶವನ್ನೂ ಸಿಸಿಟಿವಿ ಕಣ್ಗಾವಲಿಗೆ ಒಳಪಡಿಸುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಪೊಲೀಸರು ಪ್ರತಿ ವಾರ್ಡ್‌ನ ಕಾರ್ಪೊರೇಟರ್‌ಗಳು ಮತ್ತು ಪ್ರಮುಖ ನಾಗರಿಕರ ಸಹಕಾರ ಕೋರಲಿದ್ದಾರೆ.
ನಗರದ ಎಲ್ಲ ಸಣ್ಣ ಮಾರ್ಗಗಳು, ಗಲ್ಲಿಗಳು ಮತ್ತು ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂಬುದು ಈ ಯೋಜನೆಯ ಉದ್ದೇಶವಾಗಿದೆ. ಪ್ರಮುಖ ವ್ಯಾಪಾರಸ್ಥರು, ವ್ಯಾಪಾರಿಗಳು ಮತ್ತು ಅಂಗಡಿಕಾರರು ತಮ್ಮ ಕಟ್ಟಡಗಳ ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಕೇಳಿಕೊಳ್ಳಲಾಗಿದೆ. ತಮ್ಮ ವ್ಯಾಪ್ತಿಯ ಗರಿಷ್ಠ ಪ್ರದೇಶವು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಸಹಾಯಕ ಪೊಲೀಸ್ ಕಮಿಷನರ್ ಶ್ರೇಣಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಗೋಮತಿ ನಗರ ಎಸಿಪಿ ಸ್ವಾತಿ ಚೌಧರಿ, ಸಿಸಿಟಿವಿಗಳನ್ನು ಎಲ್ಲರೂ ಕಡ್ಡಾಯವಾಗಿ ಅಳವಡಿಸಬೇಕು. ಅವು ಅಪರಾಧಿಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ ಹಾಗೂ ಅಪರಾಧದ ಮಾದರಿಗಳ ಡೇಟಾಬೇಸ್ ಅನ್ನು ಸಿದ್ಧಪಡಿಸುತ್ತವೆ. ಇದರಿಂದ ನಿರ್ದಿಷ್ಟ ಸ್ಥಳದಲ್ಲಿ ನಡೆಯುವ ಅಪರಾಧದ ಆಧಾರದ ಮೇಲೆ ಪೊಲೀಸರನ್ನು ನಿಯೋಜಿಸಬಹುದು. ಕ್ಯಾಮೆರಾಗಳನ್ನು ಅಳವಡಿಸುವವರಿಗೆ ಹಿರಿಯ ಪೊಲೀಸ್ ಅಧಿಕಾರಿಯಿಂದ ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು.