ನವದೆಹಲಿ:ಹೊಸ ವರ್ಷ ಸ್ವಾಗತಕ್ಕೆ ಇಡೀ ಜಗತ್ತು ಸಜ್ಜಾಗಿದೆ. 2023ಕ್ಕೆ ಬೈ ಹೇಳಿ, 2024ಅನ್ನು ಬರಮಾಡಿಕೊಳ್ಳಲು ಜನತೆ ಕಾತರದಿಂದ ಕಾಯುತ್ತಿದ್ದಾರೆ. ನ್ಯೂಜಿಲೆಂಡ್‌ನ ಆಕ್ಲೆಂಡ್ ನೂತನ ವರ್ಷ 2024ಅನ್ನು ಈಗಾಗಲೇ ಸ್ವಾಗತಿಸಿದೆ. ಈಗಾಗಲೇ ವರ್ಣರಂಚಿತ ಪಟಾಕಿಗಳೊಂದಿಗೆ ಆ ದೇಶದ ಜನತೆ ಹೊಸ ವರ್ಷಕ್ಕೆ ಕಾಲಿಟ್ಟಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು ಸೇರಿ ಇಡೀ ದೇಶ ಕೂಡ ಹೊಸ ವರ್ಷಾಚರಣೆಯ ಸಿದ್ಧತೆಯಲ್ಲಿದೆ. ಬೆಂಗಳೂರಿನ ಎಂ. ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಕಲರ್‌ಫುಲ್ ಪಾರ್ಟಿ ಮಾಡಲು ಜನ ಆಗಮಿಸಿದ್ದಾರೆ. ಮಹಾರಾಷ್ಟ್ರ ರಾಜಧಾನಿ ಮುಂಬೈನ ಗೇಟ್‌ವೇ ಆಫ್ ಇಂಡಿಯಾದಲ್ಲೂ ಜನಸಾಗರ ಸೇರಿದೆ. ರಾಷ್ಟ್ರಪತಿ ಭವನವನ್ನು ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗಿದೆ.
ಅದರಲ್ಲೂ, ಇಂದು ವಾರಾಂತ್ಯದ ರಜೆ ಇರುವುದರಿಂದ ಜನತೆ ತಮ್ಮ ನೆಚ್ಚಿನ ತಾಣಗಳಿಗೆ ತೆರಳಿ ಸಂಭ್ರಮಿಸುತ್ತಿದ್ದಾರೆ. ತಮಿಳುನಾಡಿನ ಉದಗೈಯಲ್ಲಿ ಹೊಸ ವರ್ಷವನ್ನು ಆಚರಿಸಲು ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಇತರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸಿದ್ದು, ಬೋಟಿಂಗ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದೇ ವೇಳೆ, ಪ್ರಮುಖ ನಗರಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಶಿಮ್ಲಾದ ಮಾಲ್ ರೋಡ್‌ನಲ್ಲಿ ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಲಾಲ್ ಚೌಕ್‌ನಲ್ಲಿ ಹೊಸ ವರ್ಷದ ನಿಮಿತ್ತ ಜನತೆ ನೃತ್ಯ ಮತ್ತು ಹಾಡುಗಳಲ್ಲಿ ತೊಡಗಿದ್ದರು.
ಶುಭ ಕೋರಿದ ರಾಷ್ಟ್ರಪತಿ:ದೇಶದಲ್ಲಿಹೊಸ ವರ್ಷದ ಮುನ್ನಾ ದಿನವಾದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ನಾಗರಿಕರಿಗೆ ಶುಭಾಶಯ ಕೋರಿದ್ದಾರೆ. ''2024 ವರ್ಷವು ಎಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ನಮ್ಮ ದೇಶದ ಪ್ರಗತಿಗೆ ನಾವು ಕೊಡುಗೆ ನೀಡುವುದನ್ನು ಮುಂದುವರಿಸೋಣ. ಹೊಸ ವರ್ಷವನ್ನು ಸ್ವಾಗತಿಸೋಣ ಮತ್ತು ಸಮೃದ್ಧ ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ'' ಎಂದು ರಾಷ್ಟ್ರಪತಿ ಕರೆ ನೀಡಿದ್ದಾರೆ.