ಶಹಜಹಾನ್ಪುರ(ಉತ್ತರ ಪ್ರದೇಶ):ತೆಂಗಿನ ಮರ ಸೇರಿದಂತೆ ಇತರ ಮರಗಳನ್ನೂ ಕೂಡ ಬೇರೆ ಜಾಗಕ್ಕೆ ಬುಡಸಮೇತ ಕಿತ್ತು ನೆಡುವುದನ್ನೂ ನೀವು ನೋಡಿರಬಹುದು. ಅಂತೆಯೇ ಕೆಲವೊಮ್ಮೆ ರಸ್ತೆ ಕಾಮಗಾರಿಗಳಿಗಾಗಿ ಮೂರ್ತಿಗಳನ್ನು ಬೇರೆಡೆಗೆ ಸ್ಥಳಾಂತರ, ಸ್ಥಳ ಬದಲಾವಣೆ ಮಾಡಲಾಗುತ್ತದೆ. ಆದರೆ ಇಲ್ಲಿ ದೇವಾಲಯವನ್ನೇ ಸ್ಥಳಾಂತರ ಮಾಡುವ ಅಪರೂಪದ ಕಾರ್ಯ ನಡೆಯುತ್ತಿದೆ.
ಉತ್ತರಪ್ರದೇಶದ ಲಖನೌ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಚಿಯಾನಿ ಖೇಡಾದ ಹನುಮಾನ್ ದೇವಸ್ಥಾನ ಸ್ಥಳಾಂತರಿಸುವ ಕಾರ್ಯ ಆರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಹೆದ್ದಾರಿಯಿಂದ ತೆರವು ಮಾಡಲಾಗುತ್ತಿದೆ. ಜಾಕ್ ನೆರವಿನಿಂದ ದೇವಾಲಯವನ್ನು 8 ಅಡಿ ಹಿಂದಕ್ಕೆ ಸರಿಸಲಾಗಿದೆ. ಈ ಅಪರೂಪದ ಕಾರ್ಯಾಚರಣೆ ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರಣಕ್ಕೆ ಕಚ್ಚಿಯಾನಿ ಖೇಡದ ಹನುಮಾನ ದೇವಸ್ಥಾನವನ್ನು ಹೆದ್ದಾರಿಯಿಂದ ಪಕ್ಕಕ್ಕೆ ಸರಿಸಲಾಗುತ್ತಿದೆ. ಸ್ಥಳಾಂತರಿಸುವ ಸಲುವಾಗಿ ದೇವಸ್ಥಾನದ ತಳಭಾಗವನ್ನು ನೆಲಮಟ್ಟದಿಂದ ಬೇರ್ಪಡಿಸಿ, ಜಾಕ್ ಮಾಡುವ ಮೂಲಕ ನಿಧಾನವಾಗಿ ಹಿಂದಕ್ಕೆ ಕೊಂಡೊಯ್ಯುವ ಕೆಲಸ ಸಾಗುತ್ತಿದೆ.
ಈ ಹನುಮಾನ್ ದೇವಾಲಯವು ಸುಮಾರು 15 ಚದರ ಮೀಟರ್ ವಿಸ್ತಾರವಾಗಿದೆ. 64 ಅಡಿ ಉದ್ದ ಮತ್ತು 36 ಅಡಿ ಅಗಲವಾಗಿದೆ. ಹನುಮಾನ್ ದೇವರ ಬೃಹತ್ ವಿಗ್ರಹವನ್ನು ಸಹ ಹಿಂದಕ್ಕೆ ಸ್ಥಳಾಂತರಿಸಲಾಗುತ್ತದೆ. ಈ ಕೆಲಸ ಮುಗಿಯಲು ಸುಮಾರು 1 ತಿಂಗಳು ಹೆಚ್ಚು ಸಮಯ ಬೇಕಾಗಲಿದೆ. ಸ್ಥಳಾಂತರ ಕಾರ್ಯವು ಕಳೆದ ಮೂರು ತಿಂಗಳುಗಳಿಂದ ನಡೆಯುತ್ತಿದೆ. ಆದರೆ ಈಗ ದೇವಸ್ಥಾನ ನಿಧಾನವಾಗಿ ಹಿಂದೆ ಸರಿಯುತ್ತಿದೆ. ಶೀಘ್ರದಲ್ಲೇ ಇಡೀ ದೇವಾಲಯವು ನಿಗದಿತ ಸ್ಥಳಕ್ಕೆ ಸ್ಥಳಾಂತರವಾಗಲಿದೆ.