ಮುಂಬೈ(ಮಹಾರಾಷ್ಟ್ರ):ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರು ಬುಧವಾರ ಬೆಳಗ್ಗೆ ಮುಂಬೈನ ಚಾರ್ಕೋಪ್ ಪ್ರದೇಶದಲ್ಲಿ ಆಜಾನ್ ಕೂಗುವ ಸಂದರ್ಭದಲ್ಲಿ ಕಟ್ಟಡದ ಟೆರೇಸ್ ಮೇಲೆ ಧ್ವನಿವರ್ಧಕದ ಮೂಲಕ ಹನುಮಾನ್ ಚಾಲೀಸಾ ಪಠಿಸಿರುವ ಕುರಿತು ವರದಿಯಾಗಿದೆ.
ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಆಜಾನ್ ಕೂಗುವ ಧ್ವನಿವರ್ಧಕಗಳ ವಿರುದ್ಧ ಪ್ರತಿಭಟಿಸಲು ಧಾರ್ಮಿಕ ಸ್ತೋತ್ರವನ್ನು(ಹನುಮಾನ್ ಚಾಲೀಸಾ) ಪಠಿಸುವಂತೆ ಕರೆ ನೀಡಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಲಭ್ಯವಾಗಿರುವ ವಿಡಿಯೋದಲ್ಲಿ, ಎಂಎನ್‌ಎಸ್ ಕಾರ್ಯಕರ್ತರೊಬ್ಬರು ಪಕ್ಷದ ಧ್ವಜ ಹಿಡಿದುಕೊಂಡಿದ್ದು, ಇಲ್ಲಿನ ಬಹುಮಹಡಿಯಿಂದ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ನುಡಿಸುತ್ತಿರುವುದು ಕಂಡು ಬಂದಿದೆ.
ಪೊಲೀಸರು ಮುನ್ನೆಚ್ಚರಿಕೆ ಸೂಚನೆ ನೀಡಿದ ನಂತರವೂ ಇಂದು ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ನುಡಿಸಲು ನೀಡಿರುವ ಮುಕ್ತ ಕರೆಗಾಗಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರ ನಿವಾಸದ ಹೊರಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಇದೇ ವಿಚಾರವಾಗಿ ಸರ್ಕಾರಕ್ಕೆ ನೀಡಿರುವ ಗಡುವಿನ ವಿಚಾರವಾಗಿ ಬಾಳ್ ಠಾಕ್ರೆಯವರ ಹಳೆಯ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
ರಾಜ್ ಠಾಕ್ರೆ ಮಹತ್ವದ ಘೋಷಣೆ:ಮೇ 4ರೊಳಗೆ ಮಸೀದಿಗಳ ಮೇಲಿನ ಎಲ್ಲಾ ಧ್ವನಿವರ್ಧಕಗಳನ್ನು ತೆರವು ಮಾಡಲು ರಾಜ್ ಠಾಕ್ರೆ ಸರ್ಕಾರಕ್ಕೆ ಗಡುವು ನೀಡಿದ್ದರು. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬೆಂಬಲಿಗರಿಗೆ ಮತ್ತೆ ಕರೆ ನೀಡಿದ್ದಾರೆ. ಲೌಡ್ ಸ್ಪೀಕರ್‌ಗಳಲ್ಲಿ ಆಜಾನ್ ಕೇಳಿಸಿದರೆ, ಆ ಪ್ರದೇಶಲ್ಲಿ ಧ್ವನಿವರ್ಧಕಗಳ ಮೂಲಕ ಹನುಮಾನ್ ಚಾಲೀಸಾ ಪ್ರಸಾರ ಮಾಡಿ ಎಂದು ನಾನು ಹಿಂದೂಗಳಲ್ಲಿ ಮನವಿ ಮಾಡ್ತುತೇನೆ. ಆಗಷ್ಟೇ ಅವರಿಗೆ ಈ ಧ್ವನಿವರ್ಧಕಗಳ ಅಡಚಣೆ ಏನೆಂಬುದು ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಧ್ವನಿವರ್ಧಕಗಳ ಮೂಲಕ ಆಜಾನ್ ಕೇಳಿಸಿದ್ರೆ, ಹನುಮಾನ್ ಚಾಲೀಸಾ ಮೊಳಗಿಸಿ: ರಾಜ್ ಠಾಕ್ರೆ ಕರೆ!