ನವದೆಹಲಿ: ''ನನಗೀಗ 49 ವರ್ಷ ವಯಸ್ಸು. ಮುಂದಿನ 30 ವರ್ಷಗಳ ಕಾಲ ನಾನು ಸಂಸತ್ತಿನ ಹೊರಗೂ ಹಾಗೂ ಒಳಗೂ ಹೋರಾಟ ಮಾಡಬಹುದು. ನೈತಿಕ ಸಮಿತಿಯ ದುರುಪಯೋಗ ಯಾವತ್ತೂ ಆಗದೇ ಇರುವಷ್ಟು ಇಂದು ಆಗಿದೆ. 78 ಮಹಿಳಾ ಸಂಸದರಲ್ಲಿ ಒಬ್ಬರ ಬೇಟೆಯಾಡಲಾಗಿದೆ.'' ಇದು ಲೋಕಸಭೆಯಿಂದ ಶುಕ್ರವಾರ ಉಚ್ಛಾಟನೆಗೊಂಡ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಮಾತು.
ಹಣಕ್ಕಾಗಿ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ ಆರೋಪದ ಮೇಲೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟಿಸಲಾಗಿದೆ. ಅವರ ವಿರುದ್ಧ ನೈತಿಕ ಸಮಿತಿ ಮಾಡಿದ್ದ ಶಿಫಾರಸಿನ ಮೇಲೆ ಸದನದಲ್ಲಿ ಧ್ವನಿ ಮತದ ಮೂಲಕ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಬಳಿಕ ಸಂಸತ್ತಿನ ಭವನದ ಹೊರಗೆ ಮಾತನಾಡಿದ ಅವರು, ''17ನೇ ಲೋಕಸಭೆ ನಿಜಕ್ಕೂ ಐತಿಹಾಸಿಕ. ಇದು ಮಹಿಳಾ ಮೀಸಲಾತಿ ಮರುಹೊಂದಿಕೆ ಮಸೂದೆಯ ಅಂಗೀಕಾರ ಕಂಡ ಸದನ. ಆದರೆ, ಅದಕ್ಕೂ ಮಿಗಿಲಾಗಿ ಈ ಸದನವು 78 ಮಹಿಳಾ ಸಂಸದರಲ್ಲಿ ಒಬ್ಬರ ಬೇಟೆಯಾಡಿದೆ'' ಎಂದು ಕಟುವಾಗಿ ಟೀಕಿಸಿದರು.
''ಈ ಲೋಕಸಭೆಯು ಸಂಸದೀಯ ಸಮಿತಿಯ ಅಸ್ತ್ರೀಕರಣವನ್ನೂ ಕಂಡಿದೆ. ವಿಪರ್ಯಾಸವೆಂದರೆ, ಸದಸ್ಯರಿಗೆ ನೈತಿಕ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಲು ನೈತಿಕ ಸಮಿತಿಯನ್ನು ಸ್ಥಾಪಿಸಲಾಗಿದೆ. ಆದರೆ, ಇದರ ಬದಲಾಗಿ ಯಾವತ್ತೂ ಆಗದೇ ಇರದ ದುರುಪಯೋಗ ಇವತ್ತು ಆಗಿದೆ. ನೈತಿಕ ಸಮಿತಿ ಮತ್ತು ಅದರ ವರದಿಯು ಪುಸ್ತಕದಲ್ಲಿನ ಪ್ರತಿಯೊಂದು ನಿಯಮವನ್ನೂ ಮುರಿದಿದೆ. ಇದೊಂದು ಅಸ್ತ್ರವಾಗಿ ಪರಿವರ್ತನೆಯಾಗಿದೆ. ಮೂಲಭೂತವಾಗಿ ನಾನು ಅಸ್ತಿತ್ವದಲ್ಲಿಲ್ಲದ ನೈತಿಕ ಸಂಹಿತೆಯನ್ನು ಉಲ್ಲಂಘಿಸಿದ ತಪ್ಪಿತಸ್ಥಳೆಂದು ಕಂಡುಬರುತ್ತಿದೆ. ತನ್ನ ವಾಡಿಕೆಯ ಅಭ್ಯಾಸಕ್ಕಾಗಿ ಈ ಸಮಿತಿಯ ನನ್ನನ್ನು ಶಿಕ್ಷಿಸಿದೆ. ಲೋಕಸಭೆಯಲ್ಲಿ ಅದನ್ನು ಸ್ವೀಕರಿಸಿ ಪ್ರೋತ್ಸಾಹಿಸಲಾಗಿದೆ'' ಎಂದು ತೀವ್ರ ಅಸಮಾಧಾನ ಹೊರಹಾಕಿದರು.
ಮುಂದುವರೆದು ಮಾತನಾಡಿದ ಟಿಎಂಸಿ ನಾಯಕಿ ಮಹುವಾ, ''ನನ್ನ ವಿರುದ್ಧದ ಸಂಪೂರ್ಣ ಪ್ರಕರಣವು ಲಾಗಿನ್ ವಿವರಗಳ ಹಂಚಿಕೆಗೆ ಸಂಬಂಧಿಸಿದ್ದಾಗಿದೆ. ಆದರೆ, ಈ ಅಂಶಕ್ಕೆ ಯಾವುದೇ ನಿಯಮಗಳು ಅಡ್ಡಿಪಡಿಸುವುದಿಲ್ಲ. ನಾನು ನಗದು ಅಥವಾ ಉಡುಗೊರೆ ಸ್ವೀಕರಿಸಿರುವ ಕುರಿತು ಅವರ (ನೈತಿಕ ಸಮಿತಿ) ಬಳಿ ಯಾವುದೇ ಪುರಾವೆಗಳಿಲ್ಲ. ನನ್ನನ್ನು ಕಾಂಗರೂ ನ್ಯಾಯಾಲಯದಿಂದ ಗಲ್ಲಿಗೇರಿಸಲಾಗಿದೆ. ಇಬ್ಬರು ದೂರುದಾರರಲ್ಲಿ ಒಬ್ಬರು ದುರುದ್ದೇಶದಿಂದ ತಮ್ಮಿಂದ ದೂರವಾದ ಪಾಲುದಾರರಾಗಿದ್ದಾರೆ. ನೈತಿಕ ಸಮಿತಿಯ ಮುಂದೆ ಆತ ಸಾಮಾನ್ಯ ಪ್ರಜೆಯಂತೆ ವೇಷ ತೊಟ್ಟಿದ್ದಾನೆ. ಮುಂದಿನ 30 ವರ್ಷಗಳ ನಾನು ಸಂಸತ್ತಿನ ಹೊರಗೆ ಹಾಗೂ ಒಳಗೂ ಹೋರಾಟ ಮಾಡಬಹುದು'' ಎಂದು ಹೇಳಿದರು.
ಇದನ್ನೂ ಓದಿ:ಲೋಕಸಭೆಯಿಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಛಾಟನೆ