ತಿರುವನಂತಪುರಂ (ಕೇರಳ): ತಿರುವನಂತಪುರಂ ಜಿಲ್ಲೆಯ ನಯತಿಂಕರದಲ್ಲಿ ವಿಶೇಷಚೇತನ ವ್ಯಕ್ತಿಯ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಅರುವಿಯೋಡ್ ಮೂಲದ ವರ್ಗೀಸ್ ಘಟನೆಯಲ್ಲಿ ಗಾಯಗೊಂಡಿದ್ದಾನೆ. ಬಳಿಕ ಅತನನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸೆಬಾಸ್ಟಿಯನ್ ಎಂಬಾತನನ್ನು ಮಾರಾಯಾಮುಟ್ಟಮ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೆಬಾಸ್ಟಿಯನ್ ಮನೆಯ ಮುಂದೆ ವರ್ಗೀಸ್ ಶವಪೆಟ್ಟಿಗೆಯ ಅಂಗಡಿಯೊಂದನ್ನು ನಡೆಸುತ್ತಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ವೈಷಮ್ಯ ಉಂಟಾಗಿತ್ತು. ವರ್ಗೀಸ್ ನಡೆಸುತ್ತಿರುವ ಶವಪೆಟ್ಟಿಗೆ ಅಂಗಡಿಯ ವಿರುದ್ಧ ಸೆಬಾಸ್ಟಿಯನ್ ಪದೇ ಪದೇ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದ್ದಾನೆ.
ಆದರೆ ಈ ದೂರಿನ್ನು ಅನಧಿಕೃತ ಎಂದು ಪರಿಗಣಿಸಿದ ಪಂಚಾಯತ್ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಈ ಹಿನ್ನೆಲೆ ಆಕ್ರೋಶಗೊಂಡಿದ್ದ ಸೆಬಾಸ್ಟಿಯನ್ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ.
ಮನೆಯ ಮೇಲಿನ ಟೆರೆಸ್ಗೆ ತೆರಳಿದ ಸೆಬಾಸ್ಟಿಯನ್ ಅಲ್ಲಿಂದ ಬಾಂಬ್ ಎಸೆದಿದ್ದು, ಪಾರ್ಶ್ವವಾಯುವಿಗೆ ತುತ್ತಾಗಿರುವ ವರ್ಗೀಸ್ ಅಂಗಡಿಯಿಂದ ಹೊರ ಓಡಿಬರಲಾಗದೆ ಗಾಯಗೊಂಡಿದ್ದಾನೆ.