ತಿರುವನಂತಪುರಂ (ಕೇರಳ): ಕೇರಳದ ಮಲಪ್ಪುರಂನಲ್ಲಿ ಶುಕ್ರವಾರ ಪ್ಯಾಲೆಸ್ಟೈನ್ ಪರವಾಗಿ ಜಮಾತೆ ಇಸ್ಲಾಮಿಯ ಯುವ ಘಟಕವಾದ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಮಾಸ್ ನಾಯಕ ಖಲೀದ್ ಮಶಾಲ್ ವರ್ಚುವಲ್ ಮೂಲಕ ಪಾಲ್ಗೊಂಡಿದ್ದ ಬಗ್ಗೆ ಕೇರಳ ಬಿಜೆಪಿ ಘಟಕ ಆಘಾತ ವ್ಯಕ್ತಪಡಿಸಿದೆ.
ಉಗ್ರಗಾಮಿ ಸಂಘಟನೆಯೊಂದಿಗೆ ಇಸ್ರೇಲ್ ನಡೆಸುತ್ತಿರುವ ಯುದ್ಧದ ವಿರುದ್ಧ ರಾಜ್ಯದಲ್ಲಿ ಇಸ್ಲಾಮಿಸ್ಟ್ ಗುಂಪು ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ ಹಮಾಸ್‌ನ ಖಲೀದ್ ಮಶಾಲ್ ವರ್ಚುವಲ್ ಆಗಿ ಭಾಗವಹಿಸಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಶನಿವಾರ ಆರೋಪಿಸಿದ್ದಾರೆ. ಮಶಾಲ್ ಭಾಗವಹಿಸಿದ್ದ ಪೋಸ್ಟರ್ ಅನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ''ಸಾಂಪ್ರದಾಯಿಕವಾಗಿ ಜಾತ್ಯತೀತ ನೆಲೆಯಾದ ಕೇರಳದಲ್ಲಿ ಪರಿಸ್ಥಿತಿ ಈ ಮಟ್ಟಕ್ಕೆ ತಲುಪಿದೆ'' ಎಂದು ಆಘಾತ ಹೊರಹಾಕಿದ್ದಾರೆ.
''ಹಮಾಸ್‌ನ ಭಯೋತ್ಪಾದಕ ನಾಯಕ ಸ್ವತಃ ರಾಜ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇದು ವರ್ಚುವಲ್ ಭಾಗವಹಿಸುವಿಕೆಯಾಗಿದೆ. ಏಕೆಂದರೆ, ಅವರಿಗೆ ವೀಸಾ ಪಡೆಯಲು ಆಗಿಲ್ಲ. ಸಂಘಟಕರ ಉದ್ದೇಶಗಳು ಸ್ಪಷ್ಟವಾಗಿವೆ.'' ಎಂದು ಸುರೇಂದ್ರನ್ ಬರೆದುಕೊಂಡಿದ್ದಾರೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಕೇರಳ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಇಸ್ರೇಲ್-ಹಮಾಸ್ ಯುದ್ಧ: ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ; ನಾಚಿಕೆಗೇಡೆಂದ ವಿಪಕ್ಷಗಳು; ಭಯೋತ್ಪಾದನೆಯ ಪರವಾಗಿ ದೇಶ ಎಂದಿಗೂ ನಿಲ್ಲದು-ಬಿಜೆಪಿ
ಮತ್ತೊಂದೆಡೆ, ಹಮಾಸ್ ನಾಯಕನ ವರ್ಚುವಲ್ ಆಗಿ ಭಾಗವಹಿಸುವಿಕೆಯನ್ನು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ರಾಜ್ಯಾಧ್ಯಕ್ಷ ಸುಹೈಬ್.ಸಿ.ಟಿ. ಸಮರ್ಥಿಸಿಕೊಂಡಿದ್ದಾರೆ. "ಪ್ಯಾಲೆಸ್ಟೈನ್ ಜನರೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಲು ಮತ್ತು ಇಸ್ರೇಲ್ ದಾಳಿಯನ್ನು ಖಂಡಿಸಲು ಆಯೋಜಿಸಲಾದ ನಮ್ಮ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಇದರಲ್ಲಿ ಅಸಾಮಾನ್ಯವಾದುದನ್ನು ನೋಡುವ ಅಗತ್ಯವಿಲ್ಲ" ಎಂದು ತಿಳಿಸಿದ್ದಾರೆ.
ಮುಂದುವರೆದು, ''ಹಮಾಸ್ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಅಥವಾ ನಿಷೇಧಿತ ಸಂಘಟನೆಯಲ್ಲ. ಆ ನಾಯಕನ ಭಾಗವಹಿಸುವಿಕೆ ಕಾನೂನಿನಡಿಯಲ್ಲಿ ಅಪರಾಧವಲ್ಲ. ಭಾರತದಲ್ಲಿ ಇನ್ನೂ ಅನೇಕ ಒಗ್ಗಟ್ಟಿನ ಕಾರ್ಯಕ್ರಮಗಳು ನಡೆಯಲಿದ್ದು, ಇದು ಪ್ಯಾಲೆಸ್ಟೀನಿಯನ್ ಜನರಿಗೆ ಭಾರತೀಯರ ಬೆಂಬಲ ಸಾಬೀತುಪಡಿಸುತ್ತದೆ'' ಎಂದು ಸುಹೈಬ್ ಹೇಳಿದ್ದಾರೆ.
ಅ.7ರಂದು ಇಸ್ರೇಲ್ ಮೇಲೆ ಹಮಾಸ್ ಹಠಾತ್ ದಾಳಿಯಿಂದಾಗಿ ಸಂಘರ್ಷ ಏರ್ಪಟ್ಟಿದೆ. ಶನಿವಾರ ಇಸ್ರೇಲ್-ಹಮಾಸ್ ಯುದ್ಧಕ್ಕೆ ತಕ್ಷಣವೇ ಕದನ ವಿರಾಮ ಹಾಕಬೇಕು ಹಾಗೂ ಮಾನವೀಯ ಒಪ್ಪಂದಕ್ಕೆ ಮುಂದಾಗಬೇಕು ಎಂಬ ವಿಶ್ವಸಂಸ್ಥೆಯ ನಿರ್ಣಯ ಮತದಾನದಿಂದ ಭಾರತ ದೂರ ಉಳಿದಿದೆ. ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ನೆರವು ಎತ್ತಿಹಿಡಿಯುವುದು ಎಂಬ ಶೀರ್ಷಿಕೆಯ ವಿಶ್ವಸಂಸ್ಥೆ ನಿರ್ಣಯವನ್ನು ತೆಗೆದುಕೊಂಡಿತ್ತು. ಈ ವೇಳೆ ನಡೆದ ಮತದಾನದಲ್ಲಿ ಭಾರತ ಸೇರಿದಂತೆ 45 ರಾಷ್ಟ್ರಗಳು ತಟಸ್ಥ ನಿಲುವು ತಳೆದರೆ, 120 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿವೆ. ಅಮೆರಿಕ, ಇಸ್ರೇಲ್ ಸೇರಿದಂತೆ ಇತರ 14 ದೇಶಗಳು ನಿರ್ಣಯದ ವಿರುದ್ಧ ಮತ ಹಾಕಿವೆ.
ಇದನ್ನೂ ಓದಿ:ಹಮಾಸ್- ಇಸ್ರೇಲ್ ಕದನ ವಿರಾಮಕ್ಕೆ ವಿಶ್ವಸಂಸ್ಥೆ ನಿರ್ಣಯ: ಮತದಾನದಿಂದ ದೂರ ಉಳಿದ ಭಾರತ