ನೆಲ್ಲೂರು(ಆಂಧ್ರಪ್ರದೇಶ):ಸಂಸ್ಥಾಪನಾ ದಿನ, ವರ್ಷಾಚರಣೆಗಳ ವೇಳೆ ಕಂಪನಿಗಳು, ಸಂಸ್ಥೆಗಳು ಕೊಡುಗೆ ಘೋಷಿಸುವುದು ಸಹಜ. ಅದೇ ರೀತಿ ಇಲ್ಲೊಂದು ಸಣ್ಣ ಚಿಕನ್ ಅಂಗಡಿ ತನ್ನ 12 ವರ್ಷದ ಸಂಭ್ರಮಾಚರಣೆಗೆ ವಿನೂತನವಾದ ಆಫರ್ ನೀಡಿದೆ. ಅದೇನೆಂದರೆ ಚಲಾವಣೆಯಲ್ಲಿಲ್ಲದ ಹಳೆಯ 5 ಪೈಸೆ ನಾಣ್ಯಕ್ಕೆ ಅರ್ಧ ಕೇಜಿ ಚಿಕನ್ ನೀಡುವುದಾಗಿ ಘೋಷಣೆ ಮಾಡಿದೆ. ಕೆಲ ಜನರು ತಮ್ಮ ಬಳಿಯಿದ್ದ ಹಳೆಯ ನಾಣ್ಯವನ್ನು ಹೆಕ್ಕಿ ತೆಗೆದು ಚಿಕನ್ ಪಡೆದಿದ್ದಾರೆ.
ಈ ವಿಚಿತ್ರ ಕೊಡುಗೆ ನೀಡಿದ್ದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಆತ್ಮಕೂರು ಪಟ್ಟಣದ 786 ಚಿಕನ್ ಅಂಗಡಿ. ಜನರು ಈ ಬಂಪರ್ ಆಫರ್ ಕೇಳಿದ್ದೇ ತಡ 5 ಪೈಸೆ ಹಳೆಯ ನಾಣ್ಯವನ್ನು ಹಿಡಿದುಕೊಂಡು ಬಂದು ಸಾಲಿನಲ್ಲಿ ನಿಂತು ಖರೀದಿ ಮಾಡಿದರು. ಆ ಊರಿನವರೊಂದೇ ಅಲ್ಲ ಸುತ್ತಮುತ್ತಲಿನ ಊರಿನವರೂ ಕೂಡ ಹಣ ಹಿಡಿದುಕೊಂಡು ಬಂದು ಚಿಕನ್ ಪಡೆದಿದ್ದಾರೆ.
ಹಳೆಯ ಹಣವೇ ಏಕೆ:786 ಚಿಕನ್ ಅಂಗಡಿಯವರು ಹಲವೆಡೆ ಶಾಖೆಗಳನ್ನು ಹೊಂದಿದ್ದು, ಈಚೆಗಷ್ಟೇ ಊರಿನ ವಾಟರ್ ಪ್ಲಾಂಟ್ ಬಳಿ ಹೊಸ ಶಾಖೆಯನ್ನು ಆರಂಭಿಸಿದ್ದರು. ಇದೇ ವೇಳೆ ಅಂಗಡಿ ಆರಂಭಗೊಂಡು 12 ವರ್ಷ ಸಂದಿಸಿದ್ದು, ಇದರ ನೆನಪಿಗಾಗಿ ಜನರಿಗೆ ಕೊಡುಗೆ ಘೋಷಿಸಿತ್ತು. ಅದರಂತೆ ಹಳೆಯ ನಾಣ್ಯಗಳನ್ನು ತಂದಲ್ಲಿ ಅರ್ಧ ಕೆಜಿ ಚಿಕನ್ ನೀಡಲಾಗುವುದು ಎಂದು ಜಾಹೀರಾತು ನೀಡಿತ್ತು.
ಹಳೆಯ ನಾಣ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಅವುಗಳನ್ನು ಶೇಖರಣೆ ಮಾಡುವ ಉದ್ದೇಶದಿಂದಾಗಿ ಈ ರೀತಿಯ ವಿಶೇಷ ಕೊಡುಗೆಯನ್ನು ಅಂಗಡಿ ಘೋಷಣೆ ಮಾಡಿದೆ. ಜನರು ಚಲಾವಣೆಯಲ್ಲಿಲ್ಲದ ಹಣವನ್ನು ಬಿಸಾಡುತ್ತಾರೆ. ಆದರೆ, ಅವು ನಮ್ಮ ಪರಂಪರೆಯ ಪ್ರತೀಕ, ಪುರಾತನ ನಾಣ್ಯಗಳ ಮೌಲ್ಯವನ್ನು ತೋರಿಸಲು ಮತ್ತು ಜನರಿಗೆ ಅದನ್ನು ಮನವರಿಕೆ ಮಾಡಲು ಉಳಿದ ನಾಣ್ಯಗಳನ್ನು ಶೇಖರಣೆ ಮಾಡಲಿ ಎಂಬ ಕಾರಣಕ್ಕಾಗಿ ಈ ಕೊಡುಗೆಯನ್ನು ನೀಡಲಾಗಿತ್ತು ಎಂದು ಅಂಗಡಿಯವರು ತಿಳಿಸಿದ್ದಾರೆ.