ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿರುವ ಜ್ಞಾನವಾಪಿ ಮಸೀದಿ ಆವರಣ ಪ್ರದೇಶದಲ್ಲಿ ನಡೆಸಿದ ವಿಡಿಯೋಗ್ರಾಫಿಕ್ ಸರ್ವೇ ವರದಿಯನ್ನು ತನಿಖಾ ಆಯೋಗವು ಗುರುವಾರ ವಾರಣಾಸಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಸಮೀಕ್ಷೆಗಾಗಿ ಕೋರ್ಟ್ ನೇಮಿಸಿದ್ದ ಸ್ಪೆಷಲ್ ಅಡ್ವೋಕೇಟ್ ಕಮಿಷನರ್ ವಿಶಾಲ್ ಸಿಂಗ್ ಅವರು ಮೇ 14, 15 ಮತ್ತು 16 ರಂದು ನಡೆಸಿದ ಸರ್ವೇ ವರದಿಯನ್ನು ಜಿಲ್ಲಾ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ಒಪ್ಪಿಸಿದ್ದಾರೆ ಎಂದು ವಕೀಲ ಮದನ್ ಮೋಹನ್ ಯಾದವ್ ತಿಳಿಸಿದರು.
ಕೋರ್ಟ್ ಆದೇಶದಂತೆ ಮೇ 6 ಮತ್ತು 7ರಂದು ಅಡ್ವೋಕೇಟ್ ಕಮಿಷನರ್ ಅಜಯ್ ಮಿಶ್ರಾ ನೇತೃತ್ವದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಈ ವರದಿಯನ್ನು ಸಹ ಬುಧವಾರ ಸಂಜೆ ಕೋರ್ಟ್ಗೆ ಸಲ್ಲಿಸಲಾಗಿದೆ. ಮಂಗಳವಾರ ಮಿಶ್ರಾ ಅವರನ್ನು ನ್ಯಾಯಾಲಯ ನೇಮಿಸಿದ ಹುದ್ದೆಯಿಂದ ವಜಾಗೊಳಿಸಿ, ವಿಶಾಲ್ ಸಿಂಗ್ ಅವರನ್ನು ಸ್ಪೆಷಲ್ ಅಡ್ವೋಕೇಟ್ ಕಮಿಷನರ್ ಆಗಿ ಮತ್ತು ಅಜಯ್ ಪ್ರತಾಪ್ ಸಿಂಗ್ ಅವರನ್ನು ಅಸಿಸ್ಟೆಂಟ್ ಅಡ್ವೋಕೇಟ್ ಕಮಿಷನರ್ ಆಗಿ ನೇಮಿಸಿತ್ತು. ಮರುರಚನೆಯಾದ ಆಯೋಗವು ಮೇ 14, 15 ಮತ್ತು 16ರಂದು ಸಮೀಕ್ಷೆ ನಡೆಸಿತ್ತು. ಈ ವರದಿಯನ್ನು ಇದೀಗ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.