ವಾರಣಾಸಿ (ಉತ್ತರ ಪ್ರದೇಶ) :ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇವಸ್ಥಾನದ ಮೇಲೆ ನಿರ್ಮಿಸಲಾಗಿದೆಯೇ? ಎಂಬ ಅಂಶವನ್ನು ನಿರ್ಧರಿಸುವ ಸಲುವಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಂಡವು ಭಾನುವಾರ (ನಿನ್ನೆ) ಇಲ್ಲಿಗೆ ಆಗಮಿಸಿದ್ದು, ಇಂದಿನಿಂದ ವೈಜ್ಞಾನಿಕ ಸಮೀಕ್ಷೆ ಆರಂಭಿಸಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಈ ಕುರಿತು ಭಾನುವಾರ ಮಾಹಿತಿ ನೀಡಿದ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಸ್.ರಾಜಲಿಂಗಂ, "ಸೋಮವಾರ ಸಮೀಕ್ಷೆ ಆರಂಭವಾಗಲಿದೆ ಎಂದು ಎಎಸ್‌ಐ ನಮಗೆ ತಿಳಿಸಿದೆ" ಎಂದರು. ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ಮಾತನಾಡಿ, "ಎಎಸ್‌ಐ ತಂಡ ವಾರಣಾಸಿ ತಲುಪಿದೆ. ಸೋಮವಾರ ಬೆಳಗ್ಗೆ 7 ಗಂಟೆಗೆ ಜ್ಞಾನವಾಪಿ ಸಂಕೀರ್ಣದ ಸಮೀಕ್ಷೆ ಆರಂಭಿಸಲಿದೆ" ಎಂದು ಹೇಳಿದರು.
ಇದನ್ನೂ ಓದಿ :ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆಗೆ ವಾರಾಣಸಿ ಕೋರ್ಟ್ ಆದೇಶ
ಆಗಸ್ಟ್ 4ರೊಳಗೆ ಕೋರ್ಟ್‌ಗೆ ವರದಿ: ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಅಗತ್ಯವಿರುವಲ್ಲಿ ಉತ್ಖನನ ಸೇರಿದಂತೆ ವಿವರವಾದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುವಂತೆ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಶುಕ್ರವಾರ (ಜು.21) ಎಎಸ್‌ಐಗೆ ನಿರ್ದೇಶನ ನೀಡಿದ್ದಾರೆ. ವಜು ಸ್ಥಳ ಹೊರತುಪಡಿಸಿ ಶೃಂಗಾರ ಗೌರಿ ಆವರಣದ ಸಂಪೂರ್ಣ ಪ್ರದೇಶದ ವೈಜ್ಞಾನಿಕ ಸಮೀಕ್ಷೆಗೆ ನ್ಯಾಯಾಲಯ ಆದೇಶಿಸಿದೆ. ಭಾರತೀಯ ಪುರಾತತ್ವ ಇಲಾಖೆಯು ತನ್ನ ವರದಿಯನ್ನು ಆಗಸ್ಟ್ 4ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಕೋರ್ಟ್ ಸೂಚನೆ ನೀಡಿದೆ.