ವಾರಾಣಸಿ (ಉತ್ತರ ಪ್ರದೇಶ) : ಹೈಕೋರ್ಟ್ ಆದೇಶದ ಬಳಿಕ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಕ್ಯಾಂಪಸ್‌ನ ಸಮೀಕ್ಷೆ ಕಾರ್ಯ ಶುಕ್ರವಾರದಿಂದ ಪ್ರಾರಂಭವಾಗಿದೆ. ಸಹಾಯಕ ನಿರ್ದೇಶಕ ಅಲೋಕ್ ಕುಮಾರ್ ತ್ರಿಪಾಠಿ ಮತ್ತು ಸಂಜಯ್ ಮಹಂತಿ ಅವರ ನೇತೃತ್ವದಲ್ಲಿ (ಎಎಸ್‌ಐ) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವಿಶೇಷ ತಂಡವು ಸರ್ವೆ ನಡೆಸುತ್ತಿದೆ.
ನಿನ್ನೆ ನಡೆದ ಸಮೀಕ್ಷೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ 33 ಮಂದಿ ಹಾಗೂ ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯಿಂದ 16 ಜನರು ಭಾಗಿಯಾಗಿದ್ದರು. ಈ ವೇಳೆ ಕ್ಯಾಂಪಸ್‌ನಲ್ಲಿ ಮ್ಯಾಪಿಂಗ್ ಗ್ರಾಫಿಕ್ ಮತ್ತು ರಾಡಾರ್ ಯಂತ್ರಗಳನ್ನು ಅಳವಡಿಸಲಾಯಿತು. ಜಿಪಿಆರ್ ತಂತ್ರಜ್ಞಾನವನ್ನು ಬಳಸಿಕೊಂಡು ಎಎಸ್‌ಐ ತಂಡವು ಮಸೀದಿಯ ಆವರಣ ಮತ್ತು ಕಲಾಕೃತಿಗಳನ್ನು ತನಿಖೆ ಮಾಡುತ್ತಿದೆ. ಇಂದು ಬೆಳಗ್ಗೆ 9 ಗಂಟೆಯಿಂದ ಮತ್ತೆ ಸಮೀಕ್ಷೆ ಆರಂಭವಾಗಿದೆ.
ನಿನ್ನೆ ನಡೆದಿದ್ದೇನು? : ಶುಕ್ರವಾರ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಎಎಸ್‌ಐ ತಂಡವು ಕ್ಯಾಂಪಸ್‌ನಲ್ಲಿ ತನಿಖಾ ಕಾರ್ಯ ನಡೆಸಿತು. ಈ ವೇಳೆ ಮಧ್ಯಾಹ್ನ 12:30 ರಿಂದ 2:30 ರ ವರೆಗೆ ಸಮೀಕ್ಷೆಯನ್ನು ಸ್ಥಗಿತಗೊಳಿಸಲಾಗಿತ್ತು. ಶುಕ್ರವಾರ ಜುಮ್ಮಾ ದಿನವಾದ ಹಿನ್ನೆಲೆ ನಮಾಜ್ ಮಾಡಲು ಅವಕಾಶ ನೀಡಲಾಯಿತು. ಬಳಿಕ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಮತ್ತೆ ಪುನರಾರಂಭಿಸಲಾಯಿತು. ಇಂದು ಕೂಡ ಮಧ್ಯಾಹ್ನ 1 ಗಂಟೆ ಕಾಲ ಸರ್ವೆ ಕಾರ್ಯ ಸ್ಥಗಿತಗೊಳಿಸುವ ಸಾಧ್ಯತೆ ಇದೆ.
ಗ್ಲೋಬಲ್ ಪೆನೆಟ್ರೇಟಿಂಗ್ ರಾಡಾರ್ ಅಂದರೆ ಜಿಪಿಆರ್ ತಂತ್ರಜ್ಞಾನವನ್ನು ಬಳಸಿಕೊಂಡು ಇಂದು ರಚನೆಯನ್ನು ಪರಿಶೀಲಿಸುವ ಕೆಲಸ ಮಾಡಲಾಗುತ್ತಿದೆ. ಶುಕ್ರವಾರ, ಸ್ಥಳಾಕೃತಿ ವಿಧಾನದ ಮೂಲಕ ತನಿಖೆ ನಡೆಸಲಾಯಿತು. ಈ ವೇಳೆ, ಮಸೀದಿ ಸಮಿತಿಯ ಯಾವುದೇ ಸದಸ್ಯರು ಭಾಗವಹಿಸಿರಲಿಲ್ಲ. ಆದರೆ, ಇಂದಿನಿಂದ ಸಮಿತಿಯ ಸದಸ್ಯರೂ ಸಮೀಕ್ಷೆಯಲ್ಲಿ ಪಾಲ್ಗೊಂಡು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ :Gyanvapi : ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ; ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ
ತಂಡದಲ್ಲಿ ಒಟ್ಟು 61 ಮಂದಿ ಇದ್ದಾರೆ. ಸದ್ಯಕ್ಕೆ ಇಂದು ಕೂಡ ಸುಮಾರು 45 ಮಂದಿಗೆ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಇದರಲ್ಲಿ 32ಕ್ಕೂ ಹೆಚ್ಚು ಜನ ಎಎಸ್ ಐ ತಂಡದ ಸದಸ್ಯರಿದ್ದಾರೆ. ಸರ್ವೆ ಹಿನ್ನೆಲೆ ವಾರಾಣಸಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಜ್ಞಾನವಾಪಿ ಆವರಣ ಮತ್ತು ವಿಶ್ವನಾಥ ದೇವಸ್ಥಾನದ ಸುತ್ತಮುತ್ತ ಸ್ಥಳೀಯ ಪೊಲೀಸರೊಂದಿಗೆ ಪ್ಯಾರಾ ಮಿಲಿಟರಿ ಸಿಬ್ಬಂದಿ ನಿಯೋಜಿಸಲಾಗಿದೆ.
ಪ್ರಕರಣದ ಹಿನ್ನೆಲೆ? : 17 ನೇ ಶತಮಾನದ ಜ್ಞಾನವಾಪಿ ಮಸೀದಿಯನ್ನು ಈ ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ಪತ್ತೆ ಹಚ್ಚಲು ಹಿಂದೂ ಪರ ಸಂಘಟನೆಗಳು ಭಾರತೀಯ ಪುರಾತತ್ವ ಇಲಾಖೆಯ ವೈಜ್ಞಾನಿಕ ಸಮೀಕ್ಷೆ ಮನವಿ ಮಾಡಿದ್ದವು. ಅದರಂತೆ ಸಮೀಕ್ಷೆ ನಡೆಸಲಾಗುತ್ತಿದೆ. ಹಾಗೆಯೇ, ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಲು ನಿನ್ನೆ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಕೆಳ ನ್ಯಾಯಾಲಯದ ಆದೇಶದಂತೆ ಸರ್ವೆ ನಡೆಯುತ್ತಿದೆ.