ನವದೆಹಲಿ:ಭಾರೀ ವಿವಾದ ಸೃಷ್ಟಿಸಿರುವ ವಾರಣಾಸಿಯ ಗ್ಯಾನವಾಪಿ ಮಸೀದಿ ಸರ್ವೇ ಕಾರ್ಯ ಇಂದು ನಡೆದಿದ್ದು, ಮೊದಲ ದಿನ ಮಸೀದಿಯ ಕೆಲ ಭಾಗವನ್ನು ಚಿತ್ರೀಕರಿಸಲಾಗಿದೆ. ನಾಳೆ ಇನ್ನಷ್ಟು ಭಾಗಗಳ ಸರ್ವೇ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗ್ಯಾನವಾಪಿ ಮಸೀದಿಯಲ್ಲಿ ಹಿಂದು ದೇವತೆಗಳ ಚಿತ್ರಗಳು ಕಂಡು ಬಂದ ಹಿನ್ನೆಲೆಯಲ್ಲಿ ನಿತ್ಯ ಪೂಜೆಗೆ ಅವಕಾಶ ನೀಡಬೇಕು ಎಂದು ಮಹಿಳಾ ಗುಪೊಂದು ವಾರಾಣಸಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲು ಕೋರ್ಟ್ ಮಸೀದಿಯ ಚಿತ್ರೀಕರಣದ ಸರ್ವೇ ನಡೆಸಿ ವರದಿ ನೀಡಲು ಸೂಚಿಸಿತ್ತು.
ಆದರೆ, ಇದಕ್ಕೆ ಮಸೀದಿ ಮತ್ತು ಸಮುದಾಯದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಸರ್ವೇ ನಡೆಸಲು ಬಂದ ಅಧಿಕಾರಿಗಳನ್ನು ತಡೆದಿದ್ದ ಮಸೀದಿ, ಇದರ ವಿರುದ್ಧ ಆಕ್ಷೇಪಣಾ ಅರ್ಜಿ ಸಲ್ಲಿಸಿತ್ತು. ಬಳಿಕ ಮರು ವಿಚಾರಣೆ ನಡೆಸಿದ ಕೋರ್ಟ್ ಮಸೀದಿಯಲ್ಲಿ ಮುಚ್ಚಿಡುವಂಥದ್ದು ಏನಿದೆ. ತಕ್ಷಣವೇ ಸರ್ವೇ ಮಾಡಿ ಮೇ 17 ರೊಳಗೆ ವರದಿ ನೀಡಲು ಆಡಳಿತಕ್ಕೆ ಸೂಚನೆ ನೀಡಿತ್ತು.
ಅದರಂತೆ ಇಂದು ಅಧಿಕಾರಿಗಳ ತಂಡ ಪೊಲೀಸರ ಬಿಗಿ ಭದ್ರತೆಯೊಂದಿಗೆ ಮಸೀದಿಯ ಸರ್ವೇ ಕಾರ್ಯಕ್ಕೆ ಮುಂದಾಗಿತ್ತು. ಮಾತುಕತೆಯ ಬಳಿಕ ಮಸೀದಿ ಮತ್ತು ಸಮುದಾಯದ ಜನರು ಅವಕಾಶ ಮಾಡಿಕೊಟ್ಟಿದ್ದರು. ಇಂದು ನಡೆದ ಸರ್ವೇಯಲ್ಲಿ ಮಸೀದಿಯ ಕೆಲ ಭಾಗಗಳನ್ನು ಚಿತ್ರೀಕರಿಸಲಾಗಿದೆ. ಗ್ಯಾನವಾಪಿ -ಶೃಂಗಾರ ಗೌರಿ ಸಂಕೀರ್ಣದಲ್ಲಿನ ಎರಡು ನೆಲಮಾಳಿಗೆಗಳನ್ನು ವಿಡಿಯೋಗ್ರಫಿ ಮಾಡಲಾಗಿದೆ.
ಮೂರು ಮುಸ್ಲಿಂರದ್ದು, 1 ಹಿಂದೂ ಕೊಠಡಿ: ಇನ್ನು ಮಸೀದಿಯ ನೆಲಮಾಳಿಗೆಯಲ್ಲಿ ಮೂರು ಕೊಠಡಿಗಳಿದ್ದು, ಅದರಲ್ಲಿ ಮೂರು ಮುಸ್ಲಿಮರ ಪಾಲಿಗೆ ಸೇರಿವೆ. ಬೀಗ ಹಾಕಲಾಗಿದ್ದ ಕೊಠಡಿಗಳ ಕೀಲಿಗಳನ್ನು ಮಸೀದಿ ನೀಡಿ ಚಿತ್ರೀಕರಣಕ್ಕ ಅವಕಾಶ ಮಾಡಿಕೊಟ್ಟಿದೆ. ಇನ್ನು ಹಿಂದೂಗಳ ಪಾಲಿಗೆ ಸೇರಿದ ನಾಲ್ಕನೇ ಕೊಠಡಿಗೆ ಯಾವುದೇ ಬೀಗ ಹಾಕದ ಕಾರಣ ಯಾವುದೇ ಅಡೆತಡೆಯಿಲ್ಲದೇ ಸರ್ವೆ ನಡೆಸಲಾಗಿದೆ.
ತಡೆಯೊಡ್ಡಿದರೆ ಕಠಿಣ ಎಚ್ಚರಿಕೆ:ಮಸೀದಿಯ ಸರ್ವೇಗೆ ಮುಸ್ಲಿಂ ಸಮುದಾಯ ಭಾರೀ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕಿಡಿಕಾರಿದ್ದ ಕೋರ್ಟ್, ಮಸೀದಿ ಸಂಕೀರ್ಣದಲ್ಲಿರುವ ಕೊಠಡಿಗಳ ಸಮೀಕ್ಷೆಗಾಗಿ ಕೀಗಳು ಲಭ್ಯವಿಲ್ಲದಿದ್ದರೆ ಬೀಗ ಮುರಿದು ಸಮೀಕ್ಷೆ ನಡೆಸಿ ಎಂದು ಖಡಕ್ ಸೂಚನೆ ನೀಡಿತ್ತು. ಸರ್ವೇ ಕಾರ್ಯವನ್ನು ವಿಫಲಗೊಳಿಸಲು ಪ್ರಯತ್ನಿಸಿದರೆ ಅವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸುವಂತೆ ಅದು ಜಿಲ್ಲಾಧಿಕಾರಿಗಳಿಗೆ ಆದೇಶಿಸಿತ್ತು.
ಓದಿ:ಮತದಾನ ಸಿದ್ಧತೆಗೆ ಅನಾರೋಗ್ಯಪೀಡಿತ ಗಂಡನನ್ನು ಹೊತ್ತು ತಂದ ಹೆಂಡತಿ