ವಾರಾಣಸಿ( ಉತ್ತರಪ್ರದೇಶ): ಜ್ಞಾನವಾಪಿ ಸಂಕೀರ್ಣದ ಎಎಸ್‌ಐ ಸಮೀಕ್ಷೆ ನಡೆಸಲು, ಅಲಹಾಬಾದ್ ಹೈಕೋರ್ಟ್ ನಿನ್ನೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಕೋರ್ಟ್ ಆದೇಶದಂತೆ ಇಂದು ಬೆಳಗ್ಗೆ 7 ಗಂಟೆಯಿಂದಲೇ ಸರ್ವೇ ಆರಂಭಗೊಂಡಿದೆ. ಬೆಳಗ್ಗೆ 7:00 ರಿಂದ ವಾರಾಣಸಿ ಆಡಳಿತ ಮತ್ತು ಪೊಲೀಸರ ಬಿಗಿ ಭದ್ರತೆಯಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ASI ಜ್ಞಾನವಾಪಿ ಕ್ಯಾಂಪಸ್‌ನಲ್ಲಿ ಸಮೀಕ್ಷೆ ಕಾರ್ಯವನ್ನು ಕೈಗೊಂಡಿದೆ. ಶುಕ್ರವಾರದ ಪ್ರಾರ್ಥನೆ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಸಮೀಕ್ಷೆ ನಡೆಯಲಿದೆ.
ASI ಈ ಸಮೀಕ್ಷಾ ತಂಡದಲ್ಲಿ ಒಟ್ಟು 32 ಮಂದಿ ಎಸ್‌ಐ, 7 ಮಂದಿ ಹಿಂದೂ ಹಾಗೂ ಒಂಬತ್ತು ಮಂದಿ ಮುಸ್ಲಿಂ ಸಮುದಾಯದ ಸದಸ್ಯರಿದ್ದಾರೆ. ಆಡಳಿತದ ವತಿಯಿಂದ ಸರ್ವಪಕ್ಷಗಳೊಂದಿಗೆ ಗುರುವಾರ ನಡೆದ ಸಭೆಯ ಬಳಿಕ ಉಭಯ ಪಕ್ಷಗಳಿಗೂ ಪತ್ರ ರವಾನಿಸಿ ಈ ಮಾಹಿತಿ ನೀಡಲಾಗಿದೆ. ಜ್ಞಾನವಾಪಿಯಲ್ಲಿ ಸರ್ವೆ ಕುರಿತು ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮುಸ್ಲಿಂ ಸಂಘಟನೆಗಳು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದು, ಇಂದು ವಿಚಾರಣೆಗೆ ಬರಲಿದೆ.
ಇಂದು ಬೆಳಗ್ಗೆಯಿಂದ ಪ್ರಾರಂಭವಾಗುವ ಸಮೀಕ್ಷೆ ಪ್ರಕ್ರಿಯೆಯಲ್ಲಿ, 43 ಜನರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಮಂಜು ವ್ಯಾಸ್ ಮತ್ತು ಹಿಂದೂ ಪರ ವಕೀಲರಾದ ಹರಿಶಂಕರ್ ಮತ್ತು ವಿಷ್ಣು ಜೈನ್, ಸುಧೀರ್ ತ್ರಿಪಾಠಿ ಅವರ ಹೆಸರನ್ನು ಸೇರಿಸಲಾಗಿಲ್ಲ. ಜುಲೈ 21 ರಂದು ಸಿವಿಲ್ ನ್ಯಾಯಾಲಯ ಸಮೀಕ್ಷೆಗೆ ಅನುಮತಿ ನೀಡಿ ಆದೇಶಿಸಿತ್ತು. ಈ ಆದೇಶದ ವಿರುದ್ಧ ಮುಸ್ಲಿಂ ಸಂಘಟನೆಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಹೀಗಾಗಿ ಜುಲೈ 24 ರಂದು ಸಮೀಕ್ಷೆ ನಡೆಯುತ್ತಿರುವಾಗಲೇ ಅದಕ್ಕೆ ಸುಪ್ರೀಂನಿಂದ ತಡೆಯಾಜ್ಞೆ ನೀಡಲಾಗಿತ್ತು. ಜುಲೈ 27ರಂದು ಹೈಕೋರ್ಟ್‌ನಲ್ಲಿ ಈ ಕುರಿತು ವಿಚಾರಣೆ ನಡೆದಿದ್ದು, ಗುರುವಾರ ಹೈಕೋರ್ಟ್, ಸರ್ವೆಗೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಎರಡೂ ಕಕ್ಷಿದಾರರು ಕೋರ್ಟ್ನ ಆದೇಶ ಪಾಲಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.
ವಾರಾಣಸಿಯಲ್ಲಿ ಹೈ ಅಲರ್ಟ್:ವಾರಾಣಸಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆಗೂ ಮುನ್ನ ಇಡೀ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜ್ಞಾನವಾಪಿ ಕ್ಯಾಂಪಸ್‌ನಲ್ಲಿ ಸಮೀಕ್ಷೆಗೆ ಸಿದ್ಧತೆಗಳನ್ನು ಪೂರ್ಣಗೊಳಿಸುವುದರೊಂದಿಗೆ ಜಿಲ್ಲಾಡಳಿತವು ಪುರಾತತ್ವ ಸರ್ವೇಕ್ಷಣಾ ತಂಡದೊಂದಿಗೆ ಸಭೆ ನಡೆಸಿದೆ. ಜ್ಞಾನವಾಪಿ ಕ್ಯಾಂಪಸ್‌ನಲ್ಲಿ, ASI ಯ ಆಗ್ರಾ, ಲಖನೌ, ದೆಹಲಿ, ಪ್ರಯಾಗರಾಜ್, ವಾರಾಣಸಿ ಮತ್ತು ಪಾಟ್ನಾ ಮತ್ತು ಇತರ ಅನೇಕ ನಗರಗಳಿಂದ 32 ಜನರ ವಿಶೇಷ ತಂಡವು ಈ ಕೆಲಸವನ್ನು ಪೂರ್ಣಗೊಳಿಸುತ್ತದೆ. ಪ್ರಮುಖ ವಿಷಯವೆಂದರೆ ಜುಲೈ 24 ರಂದು ಇಡೀ ಕ್ಯಾಂಪಸ್‌ನ ಗೋಡೆಗಳಿಂದ ಇತರ ವಸ್ತುಗಳನ್ನು ಅಳೆಯುವ ಜೊತೆಗೆ ವಿಡಿಯೊ ಮತ್ತು ಫೋಟೋಗ್ರಫಿಯ ಕೆಲಸವನ್ನು ಈ ತಂಡ ಈಗಾಗಲೇ ಪೂರ್ಣಗೊಳಿಸಿದೆ.
ಮಸೀದಿಯಲ್ಲಿ ಯಾವುದೇ ಅಗೆಯುವ ಕಾರ್ಯ ಮಾಡದೇ ಕೇವಲ ಆಧುನಿಕ ತಂತ್ರಜ್ಞಾನ ಬಳಸಿ ಸರ್ವೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಎಎಸ್‌ಐ ಹೇಳಿದೆ. ಸಹಾಯಕ ನಿರ್ದೇಶಕ ಅಲೋಕ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಈ ಸರ್ವೇ ನಡೆಯುತ್ತಿದೆ. ಇದಲ್ಲದೇ, ನ್ಯಾಯಾಲಯದ ಆದೇಶದಂತೆ ಲೋಹದ ಕಲ್ಲಿನ ವಿಗ್ರಹಗಳು ಮತ್ತು ಒಳಗೆ ಪತ್ತೆಯಾದ ಎಲ್ಲವನ್ನೂ ಪ್ರತ್ಯೇಕ ಪಟ್ಟಿ ಮಾಡಬೇಕಾಗುತ್ತದೆ. ಜುಲೈ 21 ರ ಆದೇಶದ ಪ್ರಕಾರ, ಸಿವಿಲ್ ನ್ಯಾಯಾಲಯವು ತನ್ನ ವರದಿಯನ್ನು ಎಸ್‌ಐಗೆ ಸಲ್ಲಿಸಲು ಆದೇಶಿಸಿದೆ.