ಕರ್ನಾಟಕ

karnataka

ETV Bharat / bharat

ಜ್ಞಾನವಾಪಿ ಮಸೀದಿಯೋ ಮಂದಿರವೋ?: 1 ಸಾವಿರ ಪುಟಗಳ ಸಮೀಕ್ಷಾ ವರದಿ ಸಲ್ಲಿಸಿದ ಎಎಸ್​ಐ, 250 ಸಾಕ್ಷಿ ಮಂಡನೆ

ಜ್ಞಾನವಾಪಿ ಮಸೀದಿ ಸಮೀಕ್ಷೆಯ ವರದಿಯನ್ನು ಇಂದು ಕೋರ್ಟ್​ಗೆ ಸಲ್ಲಿಸಲಾಯಿತು. ಮುಂದಿನ ವಿಚಾರಣೆಯು ಡಿಸೆಂಬರ್​ 21 ರಂದು ನಡೆಯಲಿದೆ.

ಜ್ಞಾನವಾಪಿ ಮಸೀದಿ
ಜ್ಞಾನವಾಪಿ ಮಸೀದಿ

By ETV Bharat Karnataka Team

Published : Dec 18, 2023, 7:29 PM IST

ವಾರಾಣಸಿ:ಜ್ಞಾನವಾಪಿ ಮಸೀದಿಯೋ ಮಂದಿರವೋ ಎಂಬುದನ್ನು ತಿಳಿಯಲು ಭಾರತೀಯ ಪುರಾತತ್ವ ಇಲಾಖೆ ಸತತ 90 ದಿನಗಳ ಕಾಲ ವೈಜ್ಞಾನಿಕ ಸಮೀಕ್ಷೆ ನಡೆಸಿ 1 ಸಾವಿರ ಪುಟಗಳ ವರದಿಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಇಂದು (ಸೋಮವಾರ) ಸಲ್ಲಿಸಿತು. ಇದರ ಜೊತೆಗೆ ಭಗ್ನವಾದ ಕೆಲ ವಿಗ್ರಹಗಳು, ಕಲಶಗಳು ಮತ್ತಿತತರ 250 ವಸ್ತುಗಳನ್ನೂ ನೀಡಿದೆ. ಪ್ರಕರಣದ ವಿಚಾರಣೆಯು ಡಿಸೆಂಬರ್ 21 ರಂದು ನಡೆಯಲಿದೆ.

ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶೇಷ್ ಅವರ ಪೀಠವು ಎಎಸ್‌ಐ ನೀಡಿದ ವರದಿಯನ್ನು ಸ್ವೀಕರಿಸಿತು. ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿ ಎರಡು ಭಾಗಗಳಲ್ಲಿದೆ. ಮೊದಲ ವರದಿಯನ್ನು ನ್ಯಾಯಾಲಯದ ಮೇಜಿನ ಮೇಲೆ ಬಿಳಿಯ ಬಟ್ಟೆಯಲ್ಲಿ ಮುಚ್ಚಿದ ಲಕೋಟೆಯಲ್ಲಿ ನೀಡಲಾಯಿತು. ಸಮೀಕ್ಷೆಯ ವೇಳೆ ಕಂಡುಬಂದ ಸಾಕ್ಷಿಗಳನ್ನು ಹಳದಿ ಬಟ್ಟೆಯಲ್ಲಿ ಮುಚ್ಚಲಾಗಿತ್ತು. ಗೌಪ್ಯವಾಗಿ ನೀಡಬೇಕಾದ ಇವುಗಳನ್ನು ಕಾಣುವಂತೆ ನೀಡಿದ್ದು, ಆಕ್ಷೇಪಕ್ಕೆ ಕಾರಣವಾಗಿದೆ.

ವರದಿ ಸಾರ್ವಜನಿಕಗೊಳಿಸಲು ಪರ -ವಿರೋಧ:ಹಿಂದು ಪರ ಅರ್ಜಿದಾರರ ವಕೀಲರಾದ ವಿಷ್ಣು ಶಂಕರ್ ಜೈನ್ ಮತ್ತು ಸುಧೀರ್ ತ್ರಿಪಾಠಿ ಅವರು, ಸಂಪೂರ್ಣ ಕ್ರಿಯಾ ವರದಿ ಸಾರ್ವಜನಿಕ ಡೊಮೈನ್‌ಗೆ ಬರಬೇಕು. ವರದಿಯಲ್ಲಿ ಏನಿದೆ ಎಂಬುದನ್ನು ವಿಶ್ಲೇಷಣೆಗೆ ಒಳಪಡಿಸಬೇಕಿದೆ ಎಂದು ಹೇಳಿದರು. ಇದೇ ವೇಳೆ ಮಸೀದಿ ಸಮಿತಿಯ ಪರ ವಕೀಲ ವಿಷ್ಣು ಶಂಕರ್ ಜೈನ್ ಇದನ್ನು ಆಕ್ಷೇಪಿಸಿದರು. ವರದಿಯು ಯಾವುದೇ ಸಂದರ್ಭದಲ್ಲೂ ಸಾರ್ವಜನಿಕ ಡೊಮೈನ್‌ಗೆ ಬರಬಾರದು. ಅದರ ಪ್ರತಿಯನ್ನು ಫಿರ್ಯಾದಿ ಮತ್ತು ಪ್ರತಿವಾದಿಗಳಿಗೆ ಮಾತ್ರ ನೀಡಬೇಕು ಎಂದು ವಾದಿಸಿದರು.

ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ, ಮುಚ್ಚದ ಲಕೋಟೆಯಲ್ಲಿ ವರದಿಯನ್ನು ಸಲ್ಲಿಸಬೇಕಾದ ವಿಧಾನವನ್ನು ಉಲ್ಲಂಘಿಸಲಾಗಿದೆ. ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವುದು ಸೂಕ್ತವಲ್ಲ. ಅದೇ ಸಮಯದಲ್ಲಿ, ಈ ಪ್ರಕರಣದ ವರದಿಯು ಅತ್ಯಂತ ರಹಸ್ಯವಾಗಿರಬೇಕು ಮತ್ತು ಅದನ್ನು ಸಾರ್ವಜನಿಕಗೊಳಿಸಲು ನ್ಯಾಯಾಲಯವು ಅನುಮತಿಸಬಾರದು ಎಂದು ಕೋರಿದರು.

ವರದಿ ಸಲ್ಲಿಕೆಗೆ ಹಲವು ಗಡುವು:ಪುರಾತತ್ವ ಇಲಾಖೆಯು ಸಮೀಕ್ಷೆಯನ್ನು ಪೂರ್ಣಗೊಳಿಸಿ ವರದಿ ನೀಡಲು ಹಲವು ಗಡುಗಳನ್ನು ಪಡೆದುಕೊಂಡಿತು. ಜ್ಞಾನವಾಪಿ ಸಂಕೀರ್ಣದ ಸಮೀಕ್ಷೆಯು ನವೆಂಬರ್ 2 ರಂದು ಪೂರ್ಣಗೊಂಡಿತು. ಇದರ ಬಳಿಕ ವರದಿ ಸಲ್ಲಿಸಲು ಎಎಸ್‌ಐಗೆ ನ್ಯಾಯಾಲಯ ನವೆಂಬರ್ 17ರವರೆಗೆ ಕಾಲಾವಕಾಶ ನೀಡಿತು. ಇದಾದ ಬಳಿಕವೂ ಹಲವು ಬಾರಿ ದಿನಾಂಕ ನೀಡಿದರೂ ವರದಿ ಸಲ್ಲಿಸಲಾಗಲಿಲ್ಲ. ಡಿಸೆಂಬರ್ 11ರಂದು ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಆಗಲೂ ವರದಿ ಪೂರ್ಣಗೊಂಡಿರಲಿಲ್ಲ. ಬಳಿಕ ಡಿಸೆಂಬರ್ 18ರಂದು ವರದಿ ಸಲ್ಲಿಸುವಂತೆ ನ್ಯಾಯಾಲಯ ಕೊನೆಯ ಅವಕಾಶ ನೀಡಿತ್ತು.

ಆಗಸ್ಟ್ 4ರಿಂದ ಸಮೀಕ್ಷೆ ಆರಂಭ:ಜುಲೈ 21 ರಂದು ಜ್ಞಾನವಾಪಿ ಮಸೀದಿಯನ್ನು ಸರ್ವೆ ಮಾಡಲು ಕೋರ್ಟ್​ ಆದೇಶ ನೀಡಿತ್ತು. ಬಳಿಕ ಆಗಸ್ಟ್ 4ರಿಂದ ಸಮೀಕ್ಷೆ ಆರಂಭಿಸಲಾಗಿತ್ತು. ಇದಕ್ಕೆ ತಡೆ ತರಲಾಗಿತ್ತು. ತದನಂತರ ಜುಲೈ 21 ರಂದು ಸರ್ವೆ ಕಾರ್ಯವನ್ನು ಮರು ಪ್ರಾರಂಭಿಸಲಾಗಿತ್ತು. ಆಗಲೂ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣ ತಡೆ ಹಿಡಿಯಲಾಗಿತ್ತು. ಹೈಕೋರ್ಟ್‌ನಲ್ಲಿ ಮತ್ತೆ ವಿಚಾರಣೆ ಆರಂಭವಾದಾಗ, ಆಗಸ್ಟ್ 4 ರಿಂದ ನಿರಂತರವಾಗಿ ಸಮೀಕ್ಷೆ ಮುಂದುವರೆಯಿತು. ಎಎಸ್​ಐ ತಂಡವು ಜ್ಞಾನವಾಪಿಯ ಗುಮ್ಮಟದಿಂದ ಸಂಕೀರ್ಣದಲ್ಲಿರುವ ವ್ಯಾಸ್ ಜಿಯವರ ನೆಲಮಾಳಿಗೆ, ಮುಸ್ಲಿಂ ಬದಿಯ ನೆಲಮಾಳಿಗೆ ಮತ್ತು ಇತರ ಭಾಗಗಳವರೆಗೆ ಸಮೀಕ್ಷೆ ನಡೆಸಿತು.

ಇದನ್ನೂ ಓದಿ:ಜ್ಞಾನವಾಪಿ ಮಸೀದಿ ಪ್ರಕರಣ: ಶಿವಲಿಂಗಕ್ಕೆ ಜಲಾಭಿಷೇಕ ಮಾಡಲು ಬಂದ ಹಿಂದೂ ಸಂತ; ಪೊಲೀಸರಿಂದ ತಡೆ

ABOUT THE AUTHOR

...view details