ಲಖನೌ( ಉತ್ತರಪ್ರದೇಶ):ವಾರಣಾಸಿಯ ಸ್ಥಳೀಯ ನ್ಯಾಯಾಲಯದ ಆದೇಶದ ಜ್ಞಾನವಾಪಿ ಪ್ರದೇಶವನ್ನು ಸೀಲ್ ಮಾಡಲಾಗಿದೆ. ಈ ಸಂಬಂಧ ಮಸೀದಿ ಆಡಳಿತ ಮಂಡಳಿ ಇಂದು ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.
ಜ್ಞಾನವಾಪಿ ಮಸೀದಿಯ ವಿಡಿಯೊ ಸಮೀಕ್ಷೆ ಸೋಮವಾರ ಮುಕ್ತಾಯಗೊಂಡಿದೆ. ವಿಡಿಯೊ ಚಿತ್ರೀಕರಣ ವೇಳೆ ಪತ್ತೆಯಾದ ಶಿವಲಿಂಗದ ಸ್ಥಳವನ್ನು ನಿರ್ಬಂಧಿಸಲು ವಾರಾಣಸಿ ನ್ಯಾಯಾಲಯ ಆದೇಶಿಸಿದೆ. ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ವಕೀಲ ಸುಭಾಷ್ ನಂದನ್ ಚತುರ್ವೇದಿ ಹೇಳಿದ್ದರು. ಇಸ್ಲಾಮಿಕ್ ವುಜು ಅಥವಾ ಶುದ್ಧೀಕರಣ ಆಚರಣೆಗಾಗಿ ಬಳಸಲಾಗುವ ಕೊಳವನ್ನು ಮುಚ್ಚಬೇಕು ಎಂದು ಅರ್ಜಿದಾರರು ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿ ಕೇಳಿಕೊಂಡಿದ್ದರು. ವಕೀಲರ ಮನವಿ ಸ್ವೀಕರಿಸಿದ ಕೋರ್ಟ್ ಸದ್ಯಕ್ಕೆ ಕೊಳವನ್ನು ಬಳಸದಂತೆ ನೋಡಿಕೊಳ್ಳಲು ವಾರಾಣಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸೂಚಿಸಿತು.
ಕೋರ್ಟ್ ಈ ಆದೇಶ ನೀಡಿದ ತಕ್ಷಣ ಸಿಆರ್‌ಪಿಎಫ್ ಕ್ರಮ ಕೈಗೊಂಡು ಇಡೀ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಏತನ್ಮಧ್ಯೆ, ಪ್ರದೇಶವನ್ನು ಸೀಲ್ ಮಾಡುವ ನ್ಯಾಯಾಲಯದ ತೀರ್ಪಿನಿಂದ ಮುಸ್ಲಿಂ ಸಮುದಾಯ ಅಸಮಾಧಾನಗೊಂಡಿದೆ. ಇದೇ ವೇಳೆ ಮುಸ್ಲಿಂ ಅರ್ಜಿದಾರರು ನಾಳೆ ಅಲಹಾಬಾದ್ ಹೈಕೋರ್ಟ್‌ಗೆ ಮೊರೆ ಹೋಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಮಹತ್ವದ ಪಡೆದುಕೊಂಡ ಸುಪ್ರೀಂ ವಿಚಾರಣೆ :ಈ ಪ್ರಕರಣದಲ್ಲಿ ಮಹತ್ವದ ದಿನವಾಗಿದ್ದು, ಸುಪ್ರೀಂ ಕೋರ್ಟ್ ಮುಸ್ಲಿಮರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ. ಆದರೆ, ವಾರಾಣಸಿಯ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ನ್ಯಾಯಾಲಯದಲ್ಲಿ ಮೂವರು ಕೋರ್ಟ್ ಕಮಿಷನರ್‌ಗಳಿಗೆ ಮಸೀದಿ ಚಿತ್ರೀಕರಣದ ವರದಿಯನ್ನು ಪ್ರಸ್ತುತ ಪಡಿಸಲಿದ್ದಾರೆ. ಹೀಗಾಗಿ ಈ ವರದಿ ಬಹಳ ನಿರ್ಣಾಯಕವೆಂದು ಪರಿಗಣಿಸಲಾಗಿದೆ.
ಸ್ಥಳೀಯ ನ್ಯಾಯಾಲಯದ ಆದೇಶ ವಿರೋಧಿಸಿದ ಓವೈಸಿ:ಏತನ್ಮದ್ಯ ವಿವಾದ ತಾರಕಕ್ಕೇರುತ್ತಿದೆ. ಶಿವಲಿಂಗ ಪತ್ತೆಯಾದ ಪ್ರದೇಶವನ್ನು ನಿಷೇಧಿಸುವ ನ್ಯಾಯಾಲಯದ ತೀರ್ಪನ್ನು ಎಐಎಂಐಎಂನ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಆದೇಶ ಮಸೀದಿಯ ಧಾರ್ಮಿಕ ಸ್ವರೂಪವನ್ನು ಬದಲಾಯಿಸುತ್ತದೆ. ಇದು 1991ರ ಕಾಯಿದೆಯ ಉಲ್ಲಂಘನೆಯಾಗಿದೆ. ಇದು ನನ್ನ ಆತಂಕವಾಗಿತ್ತು ಮತ್ತು ಅದು ನಿಜವಾಗಿದೆ. ಜ್ಞಾನವಾಪಿ ಮಸೀದಿಯು ತೀರ್ಪಿನ ದಿನದವರೆಗೂ ಮಸೀದಿಯಾಗಿಯೇ ಉಳಿಯುತ್ತದೆ ಎಂದೂ ಇದೇ ವೇಳೆ, ವಿಶ್ವಾಸ ವ್ಯಕ್ತಪಡಿಸಿದ್ದಾರೆ