ಮುಂಬೈ (ಮಹಾರಾಷ್ಟ್ರ): ಹವಾಮಾನ ವೈಪರೀತ್ಯದಿಂದಾಗಿ ಮುಂಬೈನಿಂದ ಆಸ್ಸೋಂನ ಗುವಾಹಟಿಗೆ ತೆರಳಬೇಕಿದ್ದ ಇಂಡಿಗೋ ವಿಮಾನವು ನೆರೆಯ ರಾಷ್ಟ್ರ ಬಾಂಗ್ಲಾದೇಶದ ರಾಜಧಾನಿ ಢಾಕಾಕ್ಕೆ ಮಾರ್ಗ ಬದಲಾಯಿಸಿ, ಅಲ್ಲಿಯೇ ಲ್ಯಾಂಡ್ ಆಗಿದೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಗುವಾಹಟಿಯಲ್ಲಿನ ಕೆಟ್ಟ ಹವಾಮಾನದಿಂದಾಗಿ ಮುಂಬೈ- ಗುವಾಹಟಿ ನಡುವೆ ಇಂಡಿಗೋ ವಿಮಾನ-5319 ಅನ್ನು ಬಾಂಗ್ಲಾದೇಶದ ಢಾಕಾಕ್ಕೆ ತಿರುಗಿಸಲಾಗಿದೆ. ಈ ಕಾರ್ಯಾಚರಣೆಯ ಕಾರಣಗಳಿಂದಾಗಿ ಢಾಕಾದಿಂದ ಗುವಾಹಟಿಗೆ ವಿಮಾನವನ್ನು ಸಜ್ಜುಗೊಳಿಸಲು ಪರ್ಯಾಯ ಸಿಬ್ಬಂದಿಯನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಇಂಡಿಗೋ ಏರ್‌ಲೈನ್ಸ್ ತನ್ನ ಹೇಳಿಕೆ ಬಿಡುಗಡೆ ಮಾಡಿದೆ. ಅಲ್ಲದೇ, ವಿಮಾನದ ಪ್ರಯಾಣಿಕರಿಗೆ ಆಪ್ಡೇಟ್ ನೀಡಲಿದ್ದು, ವಿಮಾನದಲ್ಲಿ ಉಪಹಾರವನ್ನೂ ನೀಡಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಇದೇ ವೇಳೆ, ದಟ್ಟ ಮಂಜಿನ ಕಾರಣ ವಿಮಾನವನ್ನು ಢಾಕಾಕ್ಕೆ ತಿರುಗಿಸಲಾಗಿದೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ''ನಾನು ಮುಂಬೈ-ಗುವಾಹಟಿ ಇಂಡಿಗೋ ವಿಮಾನದಲ್ಲಿದ್ದೇನೆ. ಆದರೆ, ದಟ್ಟವಾದ ಮಂಜಿನಿಂದಾಗಿ ವಿಮಾನವು ಗುವಾಹಟಿಯಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಬದಲಾಗಿ, ವಿಮಾನವು ಢಾಕಾಕ್ಕೆ ಬಂದಿಳಿಯಿತು. ಈಗ ಎಲ್ಲ ಪ್ರಯಾಣಿಕರು ತಮ್ಮ ಪಾಸ್‌ಪೋರ್ಟ್ ಇಲ್ಲದೆ ಬಾಂಗ್ಲಾದೇಶದಲ್ಲಿದ್ದಾರೆ. ಎಲ್ಲರೂ ಸಹ ವಿಮಾನದೊಳಗೆ ಇದ್ದೇವೆ'' ಎಂದು ಮಹಾರಾಷ್ಟ್ರದ ಯುವ ಕಾಂಗ್ರೆಸ್ ಮಾಜಿ ಕಾರ್ಯಾಧ್ಯಕ್ಷ ಸೂರಜ್ ಸಿಂಗ್ ಠಾಕೂರ್ ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ವಿಮಾನ ಟ್ರ್ಯಾಕಿಂಗ್ ವೆಬ್ಸೈಟ್ನ ರಾಡಾರ್ ಪ್ರಕಾರ, ಈ ಇಂಡಿಗೋ ವಿಮಾನವು ಶುಕ್ರವಾರ ರಾತ್ರಿ 8.20ಕ್ಕೆ ಮುಂಬೈನಿಂದ ಗುವಾಹಟಿಗೆ ಟೇಕ್ ಆಫ್ ಆಗಬೇಕಿತ್ತು. ರಾತ್ರಿ 11.10ಕ್ಕೆ ಗುವಾಹಟಿಯಲ್ಲಿ ಇಳಿಯಬೇಕಿತ್ತು. ಆದರೆ, ವಿಮಾನವು ಮೂರು ಗಂಟೆಗಳ ವಿಳಂಬವಾಗಿ ರಾತ್ರಿ 11.20ರ ಸುಮಾರಿಗೆ ಮುಂಬೈನಿಂದ ಹೊರಟಿತ್ತು.
ಇದನ್ನೂ ಓದಿ:7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಐಎಎಫ್ ವಿಮಾನದ ಅವಶೇಷ ಪತ್ತೆ!