ಗುರುಗ್ರಾಮ್ (ಹರಿಯಾಣ):ನುಹ್‌ನಲ್ಲಿ ಸೋಮವಾರ ಆರಂಭವಾದ ಎರಡು ಗುಂಪುಗಳ ನಡುವಿನ ಘರ್ಷಣೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಗುರುಗ್ರಾಮ್ ಮತ್ತು ನೆರೆಯ ಪ್ರದೇಶಗಳಲ್ಲಿ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಸಲುವಾಗಿ, ಸರ್ಕಾರ ಶನಿವಾರದವರೆಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಏತನ್ಮಧ್ಯೆ, ಅಮೆರಿಕದ ಜೋ ಬೈಡನ್ ಸರ್ಕಾರ ಶಾಂತಿಗಾಗಿ ಕರೆ ನೀಡಿದ್ದು, ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಿದೆ.
ಅಮೆರಿಕ ಸರ್ಕಾರದ ವಕ್ತಾರ ಮ್ಯಾಥ್ಯೂ ಮಿಲ್ಲರ್, "ಹಿಂಸಾತ್ಮಕ ಘರ್ಷಣೆಗಳಿಗೆ ಸಂಬಂಧಿಸಿದಂತೆ, ನಾವು ಯಾವಾಗಲೂ ಶಾಂತಿಗಾಗಿ ಮತ್ತು ಪಕ್ಷಗಳು ಹಿಂಸಾತ್ಮಕ ಚಟುವಟಿಕೆಗಳಿಂದ ದೂರ ಇರುವಂತೆ ಮನವಿ ಮಾಡುತ್ತೇವೆ" ಎಂದು ಹೇಳಿದ್ದಾರೆ. ಹಾಗೆಯೇ ಗುರುಗ್ರಾಮ್ ಹಿಂಸಾಚಾರದಲ್ಲಿ ಅಮೆರಿಕದ ಪ್ರವಾಸಿಗರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂಬ ಬಗ್ಗೆಯೂ ಅವರು ಮಾಹಿತಿ ನೀಡಿದರು.
ಇಂಟರ್ನೆಟ್ ಸೇವೆ ಸ್ಥಗಿತ: ಸೋಮವಾರ ರಾಜ್ಯದ ನುಹ್‌ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ವಾಟ್ಸ್ಆ್ಯಪ್ , ಫೇಸ್‌ಬುಕ್, ಟ್ವಿಟರ್ ಮುಂತಾದ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಘರ್ಷಣೆ ಬಗ್ಗೆ ತಪ್ಪು ಮಾಹಿತಿ ಮತ್ತು ವದಂತಿಗಳನ್ನು ಹರಡುವುದನ್ನು ತಡೆಗಟ್ಟಲು ಇಂಟರ್ನೆಟ್ ಅಮಾನತುಗೊಳಿಸಲಾಗಿದೆ.
ಪ್ರಸ್ತುತ, ನುಹ್, ಫರಿದಾಬಾದ್, ಪಲ್ವಾಲ್ ಮತ್ತು ಗುರುಗ್ರಾಮ್, ಸೋಹ್ನಾ, ಪಟೌಡಿ ಮತ್ತು ಮಾನೇಸರ್‌ನ ಮೂರು ಉಪವಿಭಾಗಗಳಲ್ಲಿ ಆಗಸ್ಟ್ 5 ರವರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಬುಧವಾರ ನಿರ್ಧರಿಸಿದೆ. ಈ ಜಿಲ್ಲೆಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಕೂಡ ಹೆಚ್ಚಿಸಲಾಗಿದೆ.