ಚಂಡೀಗಢ: ಸ್ವಯಂ ಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಪೆರೋಲ್ ಪಡೆದು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಮಾಹಿತಿ ಪ್ರಕಾರ, ಗುರ್ಮೀತ್ ರಾಮ್ ರಹೀಮ್‌ಗೆ ಒಂದು ತಿಂಗಳ ಪೆರೋಲ್ ನೀಡಲಾಗಿದೆ. ಪೆರೋಲ್ ಸಮಯದಲ್ಲಿ ಗುರ್ಮೀತ್ ರಾಮ್ ರಹೀಮ್ ಉತ್ತರ ಪ್ರದೇಶದ ಬಾಗ್ಪತ್ನ ಆಶ್ರಮದಲ್ಲಿ ಉಳಿಯಲಿದ್ದಾರೆ.
ಇಬ್ಬರು ಸನ್ಯಾಸಿನಿಯರ ಮೇಲೆ ಅತ್ಯಾಚಾರವೆಸಗಿ ಶಿಕ್ಷೆ ಅನುಭವಿಸುತ್ತಿರುವ ಗುರ್ಮೀತ್ ರಾಮ್ ರಹೀಮ್ ಒಂದು ತಿಂಗಳ ಪೆರೋಲ್ ಕೋರಿದ್ದರು. ಈ ಸಂಬಂಧ ನ್ಯಾಯಾಲಯವು ಆಡಳಿತದಿಂದ ವರದಿ ಕೇಳಿತ್ತು. ರಾಮ್ ರಹೀಮ್ ವಿರುದ್ಧ ಬಾಗ್ಪತ್ನಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ ಎಂದು ವರದಿ ಹೇಳಿದೆ. ಈ ಹಿನ್ನೆಲೆ ನ್ಯಾಯಾಲಯವು ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ.
ಹಲವು ಬಾರಿ ಪೆರೋಲ್: ಗುರ್ಮೀತ್ ರಾಮ್ ರಹೀಮ್‌ಗೆ ಈವರೆಗೆ ಹಲವು ಬಾರಿ ಪೆರೋಲ್ ಸಿಕ್ಕಿದೆ. ಕಳೆದ ವರ್ಷ ಮೇ 12ರಂದು ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ರಾಮ್ ರಹೀಮ್ ತಮ್ಮ ಅನಾರೋಗ್ಯ ಪೀಡಿತ ತಾಯಿಯನ್ನು ಗುರುಗ್ರಾಮ್‌ನಲ್ಲಿ ಭೇಟಿಯಾಗಿದ್ದರು. ನಂತರ ಜೂನ್ 2021ರಲ್ಲಿ ರಾಮ್ ರಹೀಮ್ ಅವರನ್ನು ಮತ್ತೆ ಪಿಜಿಐಎಂಎಸ್ಗೆ ಕರೆತರಲಾಯಿತು. ಬಳಿಕ ಅವರನ್ನು ಚಿಕಿತ್ಸೆಗಾಗಿ ಜೂನ್ 6ರಂದು ಗುರುಗ್ರಾಮ್‌ನ ಮೇದಾಂತ ಮೆಡಿಸಿಟಿಗೆ ದಾಖಲಿಸಲಾಗಿತ್ತು.