ಹೈದರಾಬಾದ್ (ತೆಲಂಗಾಣ): ಖದೀಮರು ಕಳ್ಳತನಕ್ಕೂ ಮುನ್ನ ಸರಿಯಾದ ಯೋಜನೆ ರೂಪಿಸಿಕೊಂಡು ಫೀಲ್ಡ್ಗೆ ಇಳಿಯುತ್ತಾರೆ. ಆದರೆ, ಇಲ್ಲೋರ್ವ ಕಳ್ಳ ಇವರೆಲ್ಲರಿಗಿಂತ ತುಂಬಾ ಡಿಫರೆಂಟ್. ಈತನಿಗೆ ಎಲ್ಲಿ ಕಳ್ಳತನ ಮಾಡಬೇಕೆಂಬುದು ರಾತ್ರಿ ಕನಸಿನಲ್ಲಿ ಬರುತ್ತಿತ್ತಂತೆ. ಅದರಂತೆ ಮರುದಿನ ಕಳ್ಳತನ ಮಾಡುತ್ತಿದ್ದನಂತೆ. ಇದು ಯಾವುದೋ ಸಿನಿಮಾ ಕತೆಯಲ್ಲ, ಕಳ್ಳನೊಬ್ಬನ ನಿಜವಾದ ಕತೆ.!
ಇಂತಹ ಕಳ್ಳನೋರ್ವ ತೆಲಂಗಾಣದ ರಾಜಧಾನಿ ಹೈದರಾಬಾದ್ನ ವನಸ್ಥಲಿಪುರಂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅವನ ಹೆಸರು ಮುಚ್ಚು ಅಂಬೇಡ್ಕರ್ ಅಲಿಯಾಸ್ ರಾಜು ಅಲಿಯಾಸ್ ಕಂದುಲ ರಾಜೇಂದ್ರ ಪ್ರಸಾದ್. ಮೂಲತಃ ಗುಂಟೂರು ಜಿಲ್ಲೆಯ ಪಿಡುಗುರಾಳ್ಳ ಗಾಂಧಿನಗರದವನು. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಈತನ ವಿರುದ್ಧ ಹೈದರಾಬಾದ್ ಮತ್ತು ಕರ್ನಾಟಕದಲ್ಲಿ ಒಟ್ಟು 43 ಪ್ರಕರಣಗಳು ದಾಖಲಾಗಿವೆ.
30 ವರ್ಷಗಳಿಂದಲೂ ಕಳ್ಳತನ: ರಾಜುವಿನ ಕಳ್ಳತನದ ಇತಿಹಾಸ 30 ವರ್ಷಗಳಿಗೂ ಮೇಲ್ಪಟ್ಟಿದೆ. 1989ರಿಂದ ಹೈದರಾಬಾದ್ ಹಾಗೂ ಕರ್ನಾಟಕದಲ್ಲಿ ಕಳ್ಳತನ ಶುರುವಿಟ್ಟಿಕೊಂಡಿದ್ದ. 1991ರಲ್ಲಿ ಲಾಲಾಗುಡ ಪೊಲೀಸರು ಈತನನ್ನು ಬಂಧಿಸಿದ್ದರು. ನಂತರ ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ಕೈಚಳಕ ಮುಂದುವರೆಸಿದ್ದ. ಕಳೆದ 10 ವರ್ಷಗಳಿಂದ ಹೈದರಾಬಾದ್ನ ಉಪನಗರಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನದಲ್ಲಿ ತೊಡಗಿದ್ದ. ಇದುವರೆಗೆ ಈತನ ವಿರುದ್ಧ ದಾಖಲಾದ ಒಟ್ಟು 43 ಪ್ರಕರಣಗಳ ಪೈಕಿ ಹೈದರಾಬಾದ್ ಒಂದರಲ್ಲೇ 21 ಪ್ರಕರಣಗಳು ದಾಖಲಾಗಿವೆ.