ಶ್ರೀನಗರ: ನೌಗಾಮ್ ಪ್ರದೇಶದಲ್ಲಿ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಸ್ಥಳೀಯ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರರನ್ನು ಹೊಡೆದುರುಳಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.
ಶ್ರೀನಗರದ ನೌಗಾಮ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸೇನೆ ಹಾಗೂ ಪೊಲೀಸರು ನಿನ್ನೆ ರಾತ್ರಿ ಜಂಟಿ ಶೋಧ ಕಾರ್ಯ ಆರಂಭಿಸಿ ಪ್ರದೇಶವನ್ನು ಸುತ್ತುವರಿದ್ದರು. ಸಂಭವನಿಯ ಹಾನಿಯನ್ನು ತಪ್ಪಿಸಲು ಮೊದಲು ಈ ಪ್ರದೇಶದಲ್ಲಿನ ನಾಗರಿಕರನ್ನು ಸ್ಥಳಾಂತರಿಸಲು ಹೆಚ್ಚಿನ ಸಮಯ ತೆಗೆದುಕೊಂಡಿತು ಎಂದು ಜಮ್ಮು-ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಮೂವರು ಸ್ಥಳೀಯ ಎಲ್‌ಇಟಿ ಉಗ್ರರು ಹತರಾದ್ದಾರೆ. ಈ ಪೈಕಿ ಆದಿಲ್ ತೇಲಿ, ಶೋಪಿಯಾನ್‌ನ ಸಾಕಿಬ್ ತಂತ್ರಾಯ್ ಎಂದು ಗುರುತಿಸಲಾಗಿದೆ. ಮೂರನೆ ಉಗ್ರ ಬಹುಶಃ ಉಮರ್ ತೇಲಿ ಎಂದು ಗುರುತಿಸಲಾಗಿದೆ. ಉಮರ್‌ನನ್ನು ಗುರುತಿಸಲು ಅವರ ಕುಟುಂಬವನ್ನು ಸಂಪರ್ಕಿಸಲಾಗಿದೆ. ಖೋನ್ಮೋಹ್‌ನ ಸರಪಂಚ್ ಸಮೀರ್ ಅಹ್ಮದ್ ಭಟ್ ಅವರ ಹತ್ಯೆಯಲ್ಲಿ ಈ ಮೂವರು ಉಗ್ರರು ಭಾಗಿಯಾಗಿದ್ದರು. ಅವರಿಂದ ಒಂದು ಎಕೆ -47 ರೈಫಲ್ ಮತ್ತು ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಜಿಪಿ ಹೇಳಿದ್ದಾರೆ.
ನಿನ್ನೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದ ಚಾರ್ಸೋ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೊಯ್ಬಾಗೆ ಸಂಬಂಧಿಸಿದ ಸ್ಥಳೀಯ ಉಗ್ರ ಹತನಾಗಿದ್ದ.
ಇದನ್ನೂ ಓದಿ:Jammu Kashmir Encounter : ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು