ರಜೌರಿ:ಜಮ್ಮು ಪ್ರಾಂತ್ಯದ ರಜೌರಿ ಜಿಲ್ಲೆಯ ಬಾಜಿ ಕಲಾಕೋಟ್ ಪ್ರದೇಶದಲ್ಲಿ ಅಡಗಿ ಕುಳಿತಿರುವ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧರಲ್ಲಿ ಒಬ್ಬರು ಸೇನಾ ಕ್ಯಾಪ್ಟನ್ ಕೂಡ ಇದ್ದಾರೆ ಎಂದು ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಉಗ್ರರ ಪತ್ತೆ ಕಾರ್ಯಾಚರಣೆ ಮುಂದುವರೆದಿದೆ.
ಇದಕ್ಕೂ ಮುನ್ನ ಬಾಜಿ ಬಾಲಕೋಟ್ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ ಮತ್ತು ಜಮ್ಮು ಪೊಲೀಸರು ಆ ಪ್ರದೇಶವನ್ನು ಸುತ್ತುವರಿದು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಅಡಗಿ ಕುಳಿತಿದ್ದ ಉಗ್ರರು, ಜಂಟಿ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಮತ್ತು ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ.
63ನೇ ರಾಷ್ಟ್ರೀಯ ರೈಫಲ್ಸ್ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್, ಪ್ಯಾರಾಚ್ಯುತ್ ರೆಜಿಮೆಂಟ್ (ಸ್ಪೆಷಲ್ ಪೋರ್ಸ್) ಕ್ಯಾಪ್ಟನ್ ಶುಭಂ, ಪ್ಯಾರಾಚ್ಯುತ್ ರೆಜಿಮೆಂಟ್ (ಸ್ಪೆಷಲ್ ಪೋರ್ಸ್) ಹವಾಲ್ದಾರ್ ಮಜಿದ್ ಹುತಾತ್ಮರಾಗಿದ್ದಾರೆ. ಇನ್ನೋರ್ವ ಹುತಾತ್ಮ ಯೋಧರೊಬ್ಬರ ಹೆಸರು ಗೊತ್ತಾಗಿಲ್ಲ. ಹಾಗೆಯೇ ಪ್ಯಾರಾಚ್ಯುತ್ ರೆಜಿಮೆಂಟ್ (ಸ್ಪೆಷಲ್ ಪೋರ್ಸ್) ಮೇಜರ್ವೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರು ಮಂಗಳೂರು ಮೂಲದವರಾಗಿದ್ದಾರೆ.