ಸುಕ್ಮಾ(ಛತ್ತೀಸ್‌ಗಢ):ರಾಜ್ಯದ ಕೊತ್ತಪಲ್ಲಿ ಮತ್ತು ನಗರಂ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಇಂದು ಗುಂಡಿನ ಚಕಮಕಿಯಾಗಿದೆ. 5 ರಿಂದ 6 ನಕ್ಸಲರು ಗಾಯಗೊಂಡಿದ್ದಾರೆ. ನಕ್ಸಲರ ಬೃಹತ್ ಶಿಬಿರವನ್ನು ಧ್ವಂಸಗೊಳಿಸಲಾಗಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಶೋಧ ನಡೆಸಿದ ನಂತರ ಸ್ಫೋಟಕಗಳು ದೊರೆತಿವೆ.
ಸುಕ್ಮಾ ಎಸ್ಪಿ ಕಿರಣ್ ಚವ್ಹಾಣ್ ಮಾತನಾಡಿ, ಚಿಂತಲ್ನಾರ್ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಮ್ ಮತ್ತು ಕೊತ್ತಪಲ್ಲಿ ಅರಣ್ಯದಲ್ಲಿ ನಕ್ಸಲರು ಇರುವ ಮಾಹಿತಿ ಲಭಿಸಿತು. ತಕ್ಷಣವೇ ಕಾರ್ಯಾಚರಣೆ ಆರಂಭಿಸಲಾಯಿತು. ಡಿಆರ್‌ಜಿ, ಬಸ್ತಾರ್ ಫೈಟರ್ಸ್, ಕೋಬ್ರಾ 201 ಬೆಟಾಲಿಯನ್‌ನ ಜಂಟಿ ತಂಡವನ್ನು ಕೊತ್ತಪಲ್ಲಿ ಅರಣ್ಯಕ್ಕೆ ಕಳುಹಿಸಲಾಯಿತು. ನಕ್ಸಲ್ ಶಿಬಿರದ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿದವು. ಈ ದಾಳಿಯನ್ನು ತಡೆದುಕೊಳ್ಳಲಾಗದೇ ನಕ್ಸಲರು ದಟ್ಟ ಅರಣ್ಯದತ್ತ ಓಡಿ ಹೋಗಿದ್ದಾರೆ. ಎನ್‌ಕೌಂಟರ್‌ನಲ್ಲಿ 5 ರಿಂದ 6 ನಕ್ಸಲರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು.