ಗುನಾ (ಮಧ್ಯಮಪ್ರದೇಶ): ಬುಧವಾರ ರಾತ್ರಿ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗುನಾದಿಂದ ಆರೋನ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 12 ಮಂದಿ ಸಜೀವ ದಹನವಾಗಿದ್ದಾರೆ. ಬಸ್ ಕೂಡ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಘಟನೆಯಲ್ಲಿ 14 ಮಂದಿಗೆ ಸುಟ್ಟ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.
ಅಪಘಾತದ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಮತ್ತು ಜಿಲ್ಲಾಡಳಿತ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಂಧಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಮೃತರನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.
ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾಡಳಿತ: ಗುನಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಕುರಿತು ಮಾತನಾಡಿ, ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಬಸ್ ಗುನಾದಿಂದ ಆರೋನ್ ಕಡೆಗೆ ಹೋಗುತ್ತಿದ್ದು, ಡಂಪರ್ ವಾಹನ ಗುನಾ ಕಡೆಗೆ ಬರುತ್ತಿತ್ತು. ಇದೇ ವೇಳೆ ಬಸ್ ಮತ್ತು ಡಂಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪ್ರಯಾಣಿಕರು ಇದನ್ನು ಅರ್ಥ ಮಾಡಿಕೊಂಡು ಓಡಿ ಹೋಗುವಷ್ಟರಲ್ಲಿ ಬಸ್ ತುಂಬಾ ಬೆಂಕಿ ವ್ಯಾಪಿಸಿದೆ. ಘಟನೆ ವೇಳೆ ಬಸ್ಸಿನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದು, ನಾಲ್ವರು ಹೇಗೋ ಬಸ್ಸಿನಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ 12 ಜನರು ಬೆಂಕಿಯಲ್ಲೇ ನರಳಾಡಿ ತಮ್ಮ ಪ್ರಾಣ ಬಿಟ್ಟಿದ್ದಾರೆ. ಇನ್ನು 14 ಜನರಿಗೆ ಗಾಯಗಳಾಗಿದ್ದು, ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.