ಗುವಾಹಟಿ( ಅಸ್ಸೋಂ):ಮಣಿಪುರದಲ್ಲಿ ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಸೋಮವಾರ ನಡೆದ ಹೊಸ ಸಂಘರ್ಷದಲ್ಲಿ 9 ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಸಂಧಾನ ಸಭೆ ನಡೆಸಲು ಯತ್ನಿಸಿದಾಗ್ಯೂ ಅಲ್ಲಿನ ಎರಡು ಪಂಗಡಗಳ ಮಧ್ಯೆ ನಡೆಯುತ್ತಿರುವ ಕದನ ಮಾತ್ರ ತಹಬದಿಗೆ ಬರುತ್ತಿಲ್ಲ.
ಸೋಮವಾರದಂದು ಇಂಫಾಲ್ ಪೂರ್ವ ಜಿಲ್ಲೆಯ ಸಗೋಲ್ಮಾಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ನೊಂಗ್ಸುಮ್ ಗ್ರಾಮದಲ್ಲಿ ಸೋಮವಾರ ಶಂಕಿತ ಕುಕಿ ದಾಳಿಕೋರರು ಮತ್ತು ಗ್ರಾಮದ ಕೆಲ ಜನರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ, ಕನಿಷ್ಠ 9 ಜನರಿಗೆ ಗುಂಡು ತಾಕಿ ಗಾಯಗೊಂಡಿದ್ದಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಆರಂಭವಾದ ಗುಂಡಿನ ಕಾಳಗ ಸಂಜೆಯವರೆಗೂ ನಡೆಯಿತು. ಘಟನೆಯಲ್ಲಿ ಯಾವುದೇ ಈವರೆಗೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಮೊದಲು ಶಂಕಿತ ಕುಕಿ ದಾಳಿಕೋರ ಬೆಳಗ್ಗೆ 10 ಗಂಟೆಯ ಸುಮಾರಿಗೆ ನೋಂಗ್ಸುಮ್ ಗ್ರಾಮದ ಕಡೆಗೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ಇದರಿಂದ ತಕ್ಷಣವೇ ಎಚ್ಚೆತ್ತ ಎದುರಾಳಿ ಪಡೆಯ ಕೆಲವರು ಪ್ರತಿದಾಳಿ ನಡೆಸಿದ್ದಾರೆ. ಇವರಿಗೆ ಗ್ರಾಮದ ಇನ್ನಷ್ಟು ಜನರೂ ಸಾಥ್ ನೀಡಿದ್ದಾರೆ.
ಇಡೀ ದಿನ ಗುಂಡಿನ ಚಕಮಕಿ ನಡೆದ ಕಾರಣ, ಬಂಕರ್‌ಗಳು ಮತ್ತು ಸ್ಯಾಂಟ್ರಿ ಪೋಸ್ಟ್‌ಗಳನ್ನು ಸ್ಥಾಪಿಸಿದ ನೊಂಗ್‌ಸಮ್‌ನ ಗ್ರಾಮದ ಜನರು ಪ್ರತಿದಾಳಿ ನಡೆಸುತ್ತಲೇ ಇದ್ದರು. ಕುಕಿ ದಾಳಿಕೋರರ ಗುಂಡಿನ ದಾಳಿಗೆ ಮಧ್ಯಾಹ್ನ 12.30 ರ ಸುಮಾರಿಗೆ ನಾಲ್ವರು ಗ್ರಾಮಸ್ಥರು ಗುಂಡೇಟಿಗೆ ಒಳಗಾಗಿ ಗಾಯಗೊಂಡರು ಎಂದು ತಿಳಿದುಬಂದಿದೆ. ಇದಾದ ಬಳಿಕ ಮತ್ತೆ ಐವರು ಗಾಯಗೊಂಡಿದ್ದಾರೆ. ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಒಂಬತ್ತು ಜನರು ಇಂಫಾಲ್‌ನ ರಾಜ್ ಮೆಡಿಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ.