ವಲ್ಸಾದ್(ಗುಜರಾತ್): ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ಹೀರೋ ಎಂದು ಬಿಂಬಿಸಿ ಭಾಷಣ ಮಾಡಿದ ವಿದ್ಯಾರ್ಥಿಗೆ ಪ್ರಥಮ ಬಹುಮಾನ ನೀಡಿದ್ದು, ಗುಜರಾತ್ನಲ್ಲಿ ವಿವಾದವೆಬ್ಬಿಸಿದೆ.
ಗುಜರಾತ್ನ ವಲ್ಸಾದ್ ಎಂಬಲ್ಲಿನ ಶಾಲೆಯೊಂದರಲ್ಲಿ ಜಿಲ್ಲಾ ಯುವಜನ ಅಭಿವೃದ್ಧಿ ಅಧಿಕಾರಿಗಳ ಕಛೇರಿಯಿಂದ ಪ್ರತಿಭಾನ್ವೇಷಣೆ ಸ್ಪರ್ಧೆ ನಡೆಸಲಾಗಿದೆ. ಇದರಲ್ಲಿ ಗಾಂಧೀಜಿಯನ್ನು ಟೀಕಿಸಿ, ನಾಥೂರಾಮ್ ಗೋಡ್ಸೆಯನ್ನು ಹೊಗಳಿದ ವಿದ್ಯಾರ್ಥಿಗೆ ಪ್ರಥಮ ಬಹುಮಾನ ನೀಡಲಾಗಿದೆ. ಇದೀಗ ಗುಜರಾತ್ನಲ್ಲಿ ವಿವಾದದ ಕಿಡಿ ಹೊತ್ತಿಸಿದೆ.
ತನಿಖೆಗೆ ಸೂಚಿಸಿದ ಶಿಕ್ಷಣಾಧಿಕಾರಿ:ವಲ್ಸಾದ್‌ನ ಕುಸುಮ್ ಶಾಲೆಯಲ್ಲಿ ನಾಥೂರಾಂ ಗೋಡ್ಸೆಯ ವಿಷಯವನ್ನು ಆಯ್ಕೆ ಮಾಡಿಕೊಂಡು ಭಾಷಣ ಮಾಡಲು ಅವಕಾಶ ನೀಡಿದ್ದರ ವಿರುದ್ಧ ಅಲ್ಲಿನ ಶಿಕ್ಷಣಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ, ಗಾಂಧೀಜಿಯನ್ನು ತೆಗಳಿ ನಾಥೂರಾಂ ಗೋಡ್ಸೆಯನ್ನು ಹೀರೋ ಎಂದು ಬಿಂಬಿಸಿ ಭಾಷಣ ಮಾಡಿದ ವಿದ್ಯಾರ್ಥಿಗೆ ಮೊದಲ ಬಹುಮಾನ ನೀಡಿದ ಬಗ್ಗೆ ಶಾಲೆಯಿಂದ ಸ್ಪಷ್ಟನೆ ಕೇಳಿದ್ದಾರೆ. ಇದೇ ವೇಳೆ ಭಾಷಣ ಸ್ಪರ್ಧೆ ಆಯೋಜಿಸಿದ್ದ ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.