ಭುಜ್( ಗುಜರಾತ್)ಇಲ್ಲಿನ ಕಚ್ ಜಿಲ್ಲೆಯ ಭುಜ್ ತಹಸಿಲ್‌ನ ಖವ್ಡಾ ಗ್ರಾಮದ ಬಳಿಯ ನದಿಯ ದಂಡೆಯಲ್ಲಿ ಆಡುತ್ತಿದ್ದ ಮೂವರು ಹದಿಹರೆಯದ ಬಾಲಕರು ಜೀವಂತ ಸಮಾಧಿಯಾಗಿದ್ದಾರೆ.
ಖವ್ಡಾ ಬಳಿಯ ಧ್ರೋಬಾನಾ ಗ್ರಾಮದ ನಿವಾಸಿಗಳಾದ ಮುನೀರ್ ಕಡೇರ್ ಸಾಮ (13), ರಾಜಾ ರಶೀದ್ ಸಾಮ (14) ಮತ್ತು ಕಾಲಿಮುಲ್ಲ ಸಾಮ (16) ಮೃತ ಬಾಲಕರು. ಇವರ ಶವಗಳು ಭಾನುವಾರ ತಡರಾತ್ರಿ ಪತ್ತೆಯಾಗಿವೆ ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜೆ. ಪಿ. ಸೋಧಾ ಮಾಹಿತಿ ನೀಡಿದ್ದಾರೆ.
ಮೂವರು ಹುಡುಗರು ತಮ್ಮ ಹಳ್ಳಿ ಬಳಿಯ ನದಿಯ ದಂಡೆಯಲ್ಲಿ ಅಗೆದ ಬಂಕರ್ ತರಹದ ರಂಧ್ರದೊಳಗೆ ಆಟವಾಡುತ್ತಿದ್ದರು. ಆದರೆ, ಎಷ್ಟೇ ಹೊತ್ತಾದ್ರೂ ಹುಡುಗರು ಮನೆಗೆ ಹಿಂತಿರುಗದ ಕಾರಣ ಪೋಷಕರು ಅವರನ್ನು ಹುಡುಕಲು ಪ್ರಾರಂಭಿದಾಗ ಘಟನೆ ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಹುಡುಗರು ಹಳ್ಳದೊಳಗೆ ಆಟವಾಡುತ್ತಿದ್ದಾಗ, ಮಣ್ಣು ಇದ್ದಕ್ಕಿದ್ದಂತೆ ಕುಸಿದಿದೆ. ಆ ವೇಳೆ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಇವರನ್ನು ಪತ್ತೆಹಚ್ಚಿದ ನಂತರ ಗ್ರಾಮಸ್ಥರು ಹೊರಗೆಳೆದು ಹತ್ತಿರದ ಆಸ್ಪತ್ರೆಗೆ ತೆಗೆದುಕೊಂಡು ಹೋದರು ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.