ಗಾಂಧಿನಗರ (ಗುಜರಾತ್): ಬಿಜೆಪಿ ಟಿಕೆಟ್ ವಂಚಿತರಾದ ನಂತರ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಏಳು ಮುಖಂಡರ ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ಶಿಸ್ತು ಕ್ರಮ ಕೈಗೊಂಡಿದ್ದು, ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಈ ಎಲ್ಲ ಏಳು ಅಭ್ಯರ್ಥಿಗಳು ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಟಿಕೆಟ್ ಬಯಸಿದ್ದರು.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಕ್ಕಾಗಿ ಈ ಶಾಸಕರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿ.ಆರ್. ಪಟೇಲ್ ಅವರನ್ನು ಉಲ್ಲೇಖಿಸಿ ಬಿಜೆಪಿ ಪತ್ರಿಕಾ ಪ್ರಕಟಣೆ ತಿಳಿಸಿದೆ.
ನರ್ಮದಾ ಜಿಲ್ಲೆಯ ನಂದೋಡ್‌ನ ಹರ್ಷದ್ ವಾಸವ ಸೇರಿದಂತೆ ಏಳು ಬಿಜೆಪಿ ನಾಯಕರನ್ನು ಅಮಾನತುಗೊಳಿಸಲಾಗಿದೆ. ಜುನಾಗಢದ ಅರವಿಂದ್ ಲಡಾನಿ, ಸುರೇಂದ್ರನಗರದ ಧಂಗದ್ರಾದಿಂದ ಛತ್ರಸಿಂಗ್ ಗುಂಜಾರಿಯಾ, ವಲ್ಸಾದ್‌ನ ಪರಡಿಯಿಂದ ಕೇತನ್ ಭಾಯ್ ಪಟೇಲ್, ರಾಜ್‌ಕೋಟ್ ಗ್ರಾಮಾಂತರದಿಂದ ಭರತ್ ಭಾಯಿ ಚಾವ್ಡಾ, ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್‌ನಿಂದ ಉದಯ್ ಭಾಯಿ ಶಾ ಮತ್ತು ಅಮ್ರೇಲಿಯ ರಾಜುಲಾದಿಂದ ಟಿಕೆಟ್ ಬಯಸಿದ್ದ ಕರಣ್ ಭಾಯಿ ಅವರು ಅಮಾನತುಗೊಂಡಿದ್ದಾರೆ.