ಕರ್ನಾಟಕ

karnataka

ETV Bharat / bharat

108 ಕಡೆ 4 ಸಾವಿರ ಜನರಿಂದ ಸೂರ್ಯ ನಮಸ್ಕಾರ: ಗುಜರಾತ್​ನಲ್ಲಿ ವಿಶ್ವ ದಾಖಲೆ ನಿರ್ಮಾಣ

ಗುಜರಾತ್​ನ 108 ಸ್ಥಳಗಳಲ್ಲಿ 4 ಸಾವಿರಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಸೂರ್ಯ ನಮಸ್ಕಾರ ಯೋಗ ಮಾಡಿ ದಾಖಲೆ ನಿರ್ಮಿಸಿದರು.

ಸೂರ್ಯ ನಮಸ್ಕಾರ
ಸೂರ್ಯ ನಮಸ್ಕಾರ

By ETV Bharat Karnataka Team

Published : Jan 1, 2024, 8:57 PM IST

ಮೊಧೇರಾ (ಗುಜರಾತ್):ಆರೋಗ್ಯಕ್ಕೆ ಮೂಲಾಧಾರ, ಭಾರತದ ಪರಂಪರೆಯನ್ನು ಬಿಂಬಿಸುವ ಯೋಗದ ಪ್ರಾಕಾರವಾದ ಸೂರ್ಯ ನಮಸ್ಕಾರ ಗಿನ್ನೆಸ್​ ದಾಖಲೆ ಸೇರಿದೆ. ಗುಜರಾತ್​ನಲ್ಲಿ ಹೊಸ ವರ್ಷದ ಮೊದಲ ದಿನದಂದು 108 ವಿವಿಧ ಸ್ಥಳಗಳಲ್ಲಿ 4 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ಮೂಲಕ ಈ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ.

ಇಲ್ಲಿನ ಸೂರ್ಯ ದೇವಾಲಯದಲ್ಲಿ ನಡೆದ ದಾಖಲೆಯ ಸೂರ್ಯ ನಮಸ್ಕಾರ ಯೋಗದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು, ನಾಗರಿಕರು, ಯೋಗಾಸಕ್ತರು ಮತ್ತು ಹಿರಿಯ ನಾಗರಿಕರು ಭಾಗವಹಿಸಿದ್ದರು. ಏಕಕಾಲದಲ್ಲಿ 4 ಸಾವಿರಕ್ಕೂ ಅಧಿಕ ಜನರು ಸೂರ್ಯ ನಮಸ್ಕಾರ ಮಾಡಿದರು. ಇದರಿಂದ ಇಷ್ಟುಪ್ರಮಾಣದಲ್ಲಿ ಒಂದೇ ಬಾರಿಗೆ ಯೋಗ ಮಾಡಿದ್ದು ಇದೇ ಮೊದಲೆಂಬ ದಾಖಲೆಯ ಪಟ್ಟಿಗೆ ಸೇರಿದೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಗೃಹ ಸಚಿವ ಹರ್ಷ ಸಾಂಘವಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಗಾಸ ಮಾಡಿದರು. ಗಿನ್ನೆಸ್ ವಿಶ್ವ ದಾಖಲೆಯ ತೀರ್ಪುಗಾರ ಸ್ವಪ್ನಿಲ್ ದಂಗರಿಕರ್ ಈ ದಾಖಲೆಯ ಪ್ರಯತ್ನವನ್ನು ಅಧಿಕೃತವಾಗಿ ಘೋಷಿಸಿದಾಗ ಹರ್ಷೋದ್ಘಾರ ಕೇಳಿಬಂತು.

ಈ ವೇಳೆ ಮಾತನಾಡಿದ ಅವರು, ಇಷ್ಟು ಸಂಖ್ಯೆಯಲ್ಲಿ ಒಂದೇ ಬಾರಿಗೆ ಸೂರ್ಯ ನಮಸ್ಕಾರ ಮಾಡಿದ ದಾಖಲೆಯನ್ನು ಪರಿಶೀಲಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಈ ಹಿಂದೆ ಯಾರೂ ಈ ದಾಖಲೆಯನ್ನು ಮುರಿಯಲು ಪ್ರಯತ್ನಿಸಿರಲಿಲ್ಲ. ಏಕೆಂದರೆ ಇದು ಕಠಿಣವಾದ ಅಭ್ಯಾಸ. ಇದನ್ನು ಗುಜರಾತಿನ ಜನರು ಮಾಡಿದ್ದಾರೆ. ಎಲ್ಲಾ ಪುರಾವೆಗಳನ್ನು ಪರಿಶೀಲಿಸಿದ ನಂತರ ಸೂರ್ಯ ನಮಸ್ಕಾರ ಕಾರ್ಯಕ್ರಮ ಹೊಸ ವಿಶ್ವ ದಾಖಲೆ ಸೃಷ್ಟಿಸಿದೆ ಎಂದು ಸ್ವಪ್ನಿಲ್ ದಂಗರಿಕರ್ ಹೇಳಿದರು.

ಆರೋಗ್ಯಕರ ಜೀವನದ ಮಂತ್ರ:ಆರೋಗ್ಯ ಮತ್ತು ಏಕಾಗ್ರತೆಯನ್ನು ನೀಡುವ ಪ್ರಮುಖ ಔಷಧವೇ ಯೋಗ. ಇದರ ಪ್ರಾಕಾರಗಳು ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿವೆ. ಪ್ರತಿವರ್ಷ ಜೂನ್​ 21ನೇ ತಾರೀಖು ವಿಶ್ವ ಯೋಗ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

ಪ್ರಧಾನಿ ಮೋದಿ ಮೆಚ್ಚುಗೆ:ಗುಜರಾತ್​ನಲ್ಲಿ ನಿರ್ಮಾಣವಾದ ವಿಶ್ವದಾಖಲೆಯ ಸೂರ್ಯ ನಮಸ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುಜರಾತ್ 2024 ಅನ್ನು ಗಮನಾರ್ಹ ಸಾಧನೆಯೊಂದಿಗೆ ಸ್ವಾಗತಿಸಿದೆ. 108 ಸ್ಥಳಗಳಲ್ಲಿ ಏಕಕಾಲದಲ್ಲಿ 4 ಸಾವಿರಕ್ಕೂ ಅಧಿಕ ಜನರು ಸೂರ್ಯ ನಮಸ್ಕಾರವನ್ನು ಮಾಡಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದೆ. ನಮ್ಮ ಸಂಸ್ಕೃತಿಯಲ್ಲಿ 108 ಸಂಖ್ಯೆಗೆ ವಿಶೇಷ ಮಹತ್ವವಿದೆ. ಮೊಧೇರಾ ಸೂರ್ಯ ದೇವಾಲಯ ಐತಿಹಾಸಿಕ ಸ್ಥಳವಾಗಿದೆ. ಅಲ್ಲಿ ಈ ದಾಖಲೆ ನಿರ್ಮಾಣವಾಗಿದ್ದು ವಿಶೇಷ. ಯೋಗವು ನಮ್ಮ ಸಾಂಸ್ಕೃತಿಕ ಪರಂಪರೆಗೆ, ನಮ್ಮ ಬದ್ಧತೆಗೆ ಸಾಕ್ಷಿ ರೂಪವಾಗಿದೆ. ಸೂರ್ಯ ನಮಸ್ಕಾರವನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳುವಂತೆ ಜನರಲ್ಲಿ ಕೋರುತ್ತೇನೆ ಎಂದು ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಎಕ್ಸ್​ಪೋಸ್ಯಾಟ್​ ಹಿಂದಿದೆ ಮಹಿಳಾ ಶಕ್ತಿ, ಕಕ್ಷೆ ಸೇರಿದ ವರ್ಷದ ಮೊದಲ ಉಪಗ್ರಹ: ಇಸ್ರೋ

ABOUT THE AUTHOR

...view details