ಪೋರ್ಬಂದರ್/ಗುಜರಾತ್:ಅಕ್ಟೋಬರ್ 7 ರಿಂದ ಒಂಬತ್ತು ದಿನಗಳ ಅವಧಿಯ ನವರಾತ್ರಿ ಉತ್ಸವ ರಾಜ್ಯದಲ್ಲಿ ಆರಂಭವಾಗಿದೆ. ಇದರ ಪ್ರಮುಖ ಆಕರ್ಷಣೆ ಗರ್ಬಾ ನೃತ್ಯ. ಆದರೆ ಈ ಬಾರಿ ಕೊರೊನಾ ಕಾರಣ ಕೊಟ್ಟು ಗರ್ಬಾದ ಎಲ್ಲಾ ವಾಣಿಜ್ಯ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದ್ದು, ಕೇವಲ 400 ಜನರು ಮಾತ್ರ ಪಾಲ್ಗೊಳ್ಳುವಂತೆ ಸರ್ಕಾರ ಮಿತಿ ಹೇರಿದೆ. ಇದಕ್ಕೆ ಗರ್ಬಾ ಸಂಘಟಕರಿಂದ ಆಕ್ರೋಶ ವ್ಯಕ್ತವಾಗಿದೆ.
ರಾಜಕೀಯ ರ್ಯಾಲಿಗಳಿಗೆ ಬಂದಾಗ ಯಾವುದೇ ಮಿತಿ ಅಥವಾ ನಿರ್ಬಂಧಗಳಿಲ್ಲ. ಈ ಆಚರಣೆಗೆ ಯಾಕೆ ಕೇವಲ 400 ಜನರ ಮಿತಿ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಆಡಳಿತಾರೂಢ ಬಿಜೆಪಿ ತನ್ನ 'ಜನ್ ಆಶೀರ್ವಾದ ಯಾತ್ರೆ'ಯನ್ನು ಸಾವಿರಾರು ಜನರನ್ನು ಸೇರಿಸಿಕೊಂಡು ಮಾಡುತ್ತಿದೆ. ಇತರ ರಾಜಕೀಯ ಪಕ್ಷಗಳಾದ ಎಎಪಿ ಮತ್ತು ಕಾಂಗ್ರೆಸ್ ಕೂಡ ರಾಜ್ಯಾದ್ಯಂತ ತಮ್ಮ- ತಮ್ಮ ಯಾತ್ರೆಗಳನ್ನು ಮಾಡಿವೆ. ನೆರೆಯ ಜಿಲ್ಲೆಯಲ್ಲೂ ಸಹ 3,000ಕ್ಕೂ ಹೆಚ್ಚು ಜನರಿಗೆ 'ಜನ್ ಆಶೀರ್ವಾದ್ ಯಾತ್ರೆ'ಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಕೂಡ ನ್ಯಾಯ್ ಯಾತ್ರೆ ಮತ್ತು ಆಮ್ ಆದ್ಮಿ ಪಕ್ಷದ' ಜನ ಅಭಿವೃದ್ದಿ ಯಾತ್ರೆ'ಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡು ಕೊರೊನಾ ಕಟ್ಟುಪಾಡುಗಳನ್ನು ಉಲ್ಲಂಘಿಸಿದೆ. ಸರ್ಕಾರ ಅಳವಡಿಸಿಕೊಂಡಿರುವ ಇಂತಹ ವಿಭಿನ್ನ ಮಾನದಂಡಗಳ ವಿರುದ್ಧ ಸಾಮಾನ್ಯ ಮನುಷ್ಯರಲ್ಲಿ ಸಾಕಷ್ಟು ಅಸಮಾಧಾನವಿದೆ.