ಅಹಮದಾಬಾದ್(ಗುಜರಾತ್):ಮನೆಗಳಲ್ಲಿ ಇಲಿಗಳ ಕಾಟ ಸಾಮಾನ್ಯ. ಆದ್ರೆ ಇಲ್ಲೊಂದು ಇಲಿ ಮಾಡಿದ ಎಡವಟ್ಟಿನಿಂದ ಇಡೀ ಮನೆಯೇ ಸುಟ್ಟು ಭಸ್ಮವಾಗಿದೆ. ಹೌದು, ಗುಜರಾತ್ನ ಅಹಮದಾಬಾದ್ ಬಳಿ ಕರ್ಮಭೂಮಿ ಸೊಸೈಟಿಯಲ್ಲಿರುವ ಉದ್ಯಮಿ ವಿನೋದ್ ಅವರ ಮನೆ ಬುಧವಾರ ಬೆಳಗ್ಗೆ ಇಲಿಯಿಂದ ಬೆಂಕಿಗೆ ಆಹುತಿಯಾಗಿದೆ.
ಬುಧವಾರ ಬೆಳಗ್ಗೆ ಮನೆಯ ದೇವರ ಕೋಣೆಯಲ್ಲಿ ಪೂಜೆ ಮಾಡಿ ದೀಪ ಹಚ್ಚಲಾಗಿತ್ತು. ಆದ್ರೆ ಬಳಿಕ ದೀಪದ ಬತ್ತಿಯನ್ನು ಇಲಿ ಎಳೆದುಕೊಂಡು ಮನೆತುಂಬಾ ಓಡಾಡಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಬಟ್ಟೆಗಳಿಗೂ ಬೆಂಕಿ ತಗುಲಿ ಇಡೀ ಮನೆಗೆ ಜ್ವಾಲೆ ಆವರಿಸಿ, 2 ಲಕ್ಷ ನಗದು ಸೇರಿ ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಹೋಗಿವೆ. ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಹರಸಾಹಸ ಪಟ್ಟು ಬೆಂಕಿ ನಂದಿಸಿದರು. ಆದ್ರೆ ಅದಾಗಲೇ ಮನೆ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿತ್ತು.