ಅಹಮದಾಬಾದ್: ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆಯು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಸಹಯೋಗದೊಂದಿಗೆ ನಕಲಿ ಇನ್‌ವಾಯ್ಸ್‌ಗಳನ್ನು ಬಳಸಿಕೊಂಡು ಕೊಟ್ಯಂತರ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಯೊಂದರ ಅಧ್ಯಕ್ಷನನ್ನು ಬಂಧಿಸಿದೆ.
ಮಾಧವ್ ಕಾಪರ್ ಲಿಮಿಟೆಡ್‌ನ ಅಧ್ಯಕ್ಷ ನೀಲೇಶ್ ಪಟೇಲ್ ಬಂಧಿತ ವ್ಯಕ್ತಿ. ಈತ 137 ಕೋಟಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು 762 ಕೋಟಿ ರೂಪಾಯಿ ಮೌಲ್ಯದ ನಕಲಿ ಇನ್‌ವಾಯ್ಸ್‌ಗಳನ್ನು ನೀಡಿ, ರಾಜ್ಯದ ಖಜಾನೆಗೆ ನಷ್ಟ ಉಂಟು ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ಹಿಂದೆಯೂ ಸಹ ನೀಲೇಶ್ ಪಟೇಲ್ನನ್ನು ಜಿಎಸ್‌ಟಿ ತಂಡ ಬಂಧಿಸಿದೆ. ಆದ್ರೆ, ಈ ವೇಳೆ ಆತ ಜಿಎಸ್‌ಟಿ ಅಧಿಕಾರಿಗಳ ವಾಹನಕ್ಕೆ ಡಿಕ್ಕಿ ಹೊಡೆದು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಈ ಬಾರಿ ಎಟಿಎಸ್ ನೆರವು ಪಡೆದು ಜಿಎಸ್‌ಟಿ ಅಧಿಕಾರಿಗಳು ಪಟೇಲ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಜುಲೈನಲ್ಲೇ ಬಯಲಿಗೆ ಬಂದ ವಂಚನೆ ಪ್ರಕರಣ: 137 ಕೋಟಿ ರೂ ಬೋಗಸ್ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು 762 ಕೋಟಿ ರೂಪಾಯಿ ಮೌಲ್ಯದ ನಕಲಿ ಬಿಲ್ಗಳನ್ನು ನೀಡಿ, ರಾಜ್ಯದ ಬೊಕ್ಕಸಕ್ಕೆ ಹಾನಿ ಮಾಡಿದ ಆರೋಪ ಪಟೇಲ್ ಮೇಲಿದೆ ಎಂದು ಜಿಎಸ್‌ಟಿ ಇಲಾಖೆ ಕಳೆದ ವರ್ಷದ ಜುಲೈನಲ್ಲಿ ಪ್ರಕಟಣೆಯಲ್ಲಿ ತಿಳಿಸಿತ್ತು. ಆದ್ರೆ, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದರಿಂದ ಈ ಸಂಬಂಧ ಹಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.
ನೀಲೇಶ್ ಪಟೇಲ್ ವಿಚಾರಣೆಗೆ ಹಾಜರಾಗದಿದ್ದಾಗ ಇಲಾಖೆಯು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಅಲ್ಲದೇ, ನ್ಯಾಯಾಲಯ ಅವರ ವಿರುದ್ಧ ಸಮನ್ಸ್ ಜಾರಿ ಮಾಡಿತ್ತು. ಫೆಬ್ರವರಿ 11, 2022 ರಂದು ಸುಪ್ರೀಂಕೋರ್ಟ್ ಪಟೇಲ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.