ಕರ್ನಾಟಕ

karnataka

ETV Bharat / bharat

ಗುಜರಾತ್​ನಲ್ಲಿ ಹೀಗೊಂದು ಹೈಡ್ರಾಮ: 'ಕಿಡ್ನಾಪ್​' ಆದ ಅಭ್ಯರ್ಥಿಯಿಂದ ನಾಮಪತ್ರ ವಾಪಸ್, ಆಪ್ ನಾಯಕರಿಗೆ ಶಾಕ್ - ಚುನಾವಣಾ ಆಯೋಗಕ್ಕೆ ದೂರು

ಗುಜರಾತ್​ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಕ್ಕರೂ ನನ್ನ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಪಕ್ಷದ ಕಾರ್ಯಕರ್ತರೇ ಹೇಳಿದ್ದರು. ಆದರೆ, ಆಪ್​ ನಾಯಕರು ಬಿಜೆಪಿಯ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಯಾರನ್ನೂ ಅಪಹರಿಸಿಲ್ಲ ಎಂದು ಆಪ್​ ಮುಖಂಡ ಕಾಂಚನ್ ಜರಿವಾಲಾ ತಿಳಿಸಿದ್ದಾರೆ.

gujarat-polls-aaps-kidnapped-candidate-resurfaces-withdraws-candidature
ಗುಜರಾತ್​ನಲ್ಲಿ ಹೀಗೊಂದು ಹೈಡ್ರಾಮ: 'ಕಿಡ್ನಾಪ್​' ಆದ ಅಭ್ಯರ್ಥಿಯಿಂದ ನಾಮಪತ್ರ ವಾಪಸ್, ಆಪ್ ನಾಯಕರಿಗೆ ಶಾಕ್

By

Published : Nov 16, 2022, 9:22 PM IST

ಸೂರತ್/ನವದೆಹಲಿ:ಗುಜರಾತ್ ವಿಧಾನಸಭಾ ಚುನಾವಣಾ ಕಣದಲ್ಲಿ ಇಂದು ಹೈಡ್ರಾಮಾವೊಂದು ನಡೆದಿದೆ. ಸೂರತ್ ಪೂರ್ವ ವಿಧಾನಸಭಾ ಕ್ಷೇತ್ರದ ತಮ್ಮ ಅಭ್ಯರ್ಥಿಯಾದ ಕಾಂಚನ್ ಜರಿವಾಲಾ ಅವರನ್ನು ಬಿಜೆಪಿ ಅಪಹರಿಸಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಆದರೆ, ಇದರ ನಡುವೆಯೇ ಕಾಂಚನ್ ಜರಿವಾಲಾ ತಮ್ಮ ನಾಮಪತ್ರವನ್ನು ಹಿಂಪಡೆದು ಶಾಕ್​ ನೀಡಿದ್ದಾರೆ.

ಸೂರತ್ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಆಮ್​ ಆದ್ಮಿ ಪಕ್ಷದಿಂದ ಕಾಂಚನ್ ಜರಿವಾಲಾ ಸಲ್ಲಿಸಿದ್ದ ನಾಮಪತ್ರ ಅನರ್ಹಗೊಳಿಸಲು ಬಿಜೆಪಿ ಹಲವು ಪ್ರಯತ್ನಗಳನ್ನು ಮಾಡಿದೆ. ಆದರೆ, ಅದು ಸಾಧ್ಯವಾಗಿಲ್ಲ. ಅಲ್ಲದೇ, ಕಾಂಚನ್ ಜರಿವಾಲಾ ಅವರನ್ನು ಹಲವು ದಿನಗಳಿಂದ ಬಿಜೆಪಿಯವರು ಹಿಂಬಾಲಿಸುತ್ತಿದ್ದರು ಎಂದು ಆಪ್​ ಮುಖಂಡರು ಬುಧವಾರ ಬೆಳಗ್ಗೆಯಿಂದಲೂ ಆರೋಪಿಸಲು ಆರಂಭಿಸಿದ್ದರು.

ಕೊನೆಗೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಮಂಗಳವಾರ ಕಾಂಚನ್​ ಜರಿವಾಲಾರನ್ನು ಬಿಜೆಪಿಯವರು ಅಪಹರಿಸಿ, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲದೇ, ಕುಟುಂಬ ಸದಸ್ಯರನ್ನೂ ಅಪಹರಿಸಲಾಗಿದೆ ಎಂದು ಆಪ್​ ಹಿರಿಯ ನಾಯಕರಾದ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಹಾಗೂ ಘವ್ ಚಡ್ಡಾ, ಸಂಜಯ್ ಸಿಂಗ್ ಸಹ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದರು.

ಚುನಾವಣಾ ಆಯೋಗಕ್ಕೆ ದೂರು: ಅಲ್ಲದೇ, ಮನೀಶ್ ಸಿಸೋಡಿಯಾ ನೇತೃತ್ವದ ನಾಲ್ವರು ಸದಸ್ಯರ ನಿಯೋಗ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಗುಜರಾತ್​ನಲ್ಲಿ ಬಿಜೆಪಿ ಪೊಲೀಸ್ ಮತ್ತು ಚುನಾವಣಾ ಯಂತ್ರಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಲ್ಲದೇ, ಕಾಂಚನ್ ಜರಿವಾಲಾ ಅವರನ್ನು ಬಲವಂತವಾಗಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆ ಎಂದು ದೂರು ನೀಡಿದೆ.

ಇದನ್ನೂ ಓದಿ:ಸಾರ್ವಜನಿಕರಿಂದ 1 ರೂಪಾಯಿ ನಾಣ್ಯ ಸಂಗ್ರಹಿಸಿದ ಎಎಪಿ ಅಭ್ಯರ್ಥಿ: ಅದನ್ನೇ ಠೇವಣಿ ಇಟ್ಟು ನಾಮಪತ್ರ ಸಲ್ಲಿಕೆ

ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಸೋಡಿಯಾ, 24 ಗಂಟೆಗಳ ಹಿಂದೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಿಂದ ನಮ್ಮ ಅಭ್ಯರ್ಥಿ ವಿರುದ್ಧ ಬಿಜೆಪಿ ಷಡ್ಯಂತ್ರ ಮಾಡಿದೆ. ಭಾರತದ ಪ್ರಜಾಪ್ರಭುತ್ವದಲ್ಲೇ ಇದು ಮೊದಲ ಬಾರಿಗೆ ಈ ರೀತಿ ನಡೆದಿದೆ. ಇದ್ದಕ್ಕಿದ್ದಂತೆ ನಮ್ಮ ಅಭ್ಯರ್ಥಿಯಾದ ಕಾಂಚನ್ ಜರಿವಾಲಾ ಕಿಡ್ನಾಪ್ ಮಾಡಲಾಗುತ್ತದೆ. ನಂತರ ಪೋಲೀಸ್ ಭದ್ರತೆಯಲ್ಲೇ ಅವರನ್ನು ಮತ್ತೆ ಚುನಾವಣಾಧಿಕಾರಿಗಳ ಕಚೇರಿಗೆ ಕರೆತಂದು ನಾಮಪತ್ರ ಹಿಂಪಡೆಯುವಂತೆ ಮಾಡಲಾಗಿದೆ ಎಂದು ಆರೋಪಿಸಿದರು.

ಉಲ್ಟಾ ಹೊಡೆದ ಕಾಂಚನ್ ಜರಿವಾಲಾ:ಆದರೆ, ಇತ್ತನಮ್ಮ ಅಭ್ಯರ್ಥಿಯನ್ನು ಬಿಜೆಪಿ ಅಪಹರಿಸಿದೆ ಎಂಬ ಆಪ್​ ಆರೋಪಕ್ಕೆ ತದ್ವಿರುದ್ಧವಾಗಿ ಕಾಂಚನ್ ಜರಿವಾಲಾ ಹೇಳಿಕೆ ನೀಡಿದ್ದಾರೆ. ಅಲ್ಲದೇ, ತಮ್ಮನ್ನು ಯಾರೂ ಅಪಹರಿಸಿಲ್ಲ ಎಂದು ಕಾಂಚನ್ ಜರಿವಾಲಾ ಉಲ್ಟಾ ಹೊಡೆದಿದ್ದಾರೆ. ಮಾನಸಿಕ ಒತ್ತಡದಿಂದ ಹೊರ ಬರಲು ಸಂಬಂಧಿಕರನ್ನು ಭೇಟಿ ಮಾಡಲು ಹೋಗಿದ್ದೆ ಎಂದು ಹೇಳಿ ಆಪ್​ ನಾಯಕರಿಗೆ ಶಾಕ್​ ಕೊಟ್ಟಿದ್ದಾರೆ.

ಇಷ್ಟೆ ಅಲ್ಲ, ನಾನು ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದನ್ನು ಜನತೆ ಇಷ್ಟ ಪಡುತ್ತಿಲ್ಲ. ಇದನ್ನು ಸ್ವತಃ ನನ್ನ ಸಹೋದರ ಮತ್ತು ಅವರ ಪತ್ನಿಯೇ ನನಗೆ ತಿಳಿಸಿದ್ದಾರೆ. ಆದ್ದರಿಂದ ನಾನು ನಾಮಪತ್ರವನ್ನು ಹಿಂಪಡೆದಿದ್ದೇನೆ. ಜೊತೆಗೆ ಪಕ್ಷದ ಕಾರ್ಯಕರ್ತರು ಸಹ ನನ್ನೊಂದಿಗೆ ಸಂತೋಷವಾಗಿರಲಿಲ್ಲ.

ನನಗೆ ಟಿಕೆಟ್ ಸಿಕ್ಕರೂ ನನ್ನ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಪಕ್ಷದ ಕಾರ್ಯಕರ್ತರೇ ಹೇಳಿದ್ದರು. ಆದ್ದರಿಂದ ಈ ಒತ್ತಡದಿಂದ ಹೊರ ಬರಲು ಸಂಬಂಧಿಕರೊಂದಿಗೆ ಸಮಯ ಕಳೆಯಲು ಹೋಗಿದ್ದೆ. ಆದರೆ, ಆಪ್​ ನಾಯಕರು ಬಿಜೆಪಿಯ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಯಾರನ್ನೂ ಅಪಹರಿಸಿಲ್ಲ ಎಂದು ಕಾಂಚನ್ ಜರಿವಾಲಾ ತಿಳಿಸಿದ್ದಾರೆ.

ಹಣಕ್ಕೆ ಬೇಡಿಕೆ ಇಟ್ಟಿದ್ದರು: ಆಪ್​ ಕಾರ್ಯಕರ್ತರುಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. 80 ಲಕ್ಷದಿಂದ 1 ಕೋಟಿ ರೂಪಾಯಿ ಖರ್ಚು ಮಾಡುವಷ್ಟು ಸಾಮರ್ಥ್ಯ ನನಗಿಲ್ಲ. ಅವರ ಬೇಡಿಕೆ ಎಷ್ಟಿತ್ತೆಂದರೆ ಅದನ್ನು ಈಡೇರಿಸಲು ಸಾಧ್ಯವಾಗುತ್ತಿರಲಿಲ್ಲ. ನಾನು ಮುಂದೇನು ಮಾಡಬೇಕೆಂಬುವುದನ್ನು 5-7 ದಿನಗಳ ನಂತರ ಹೇಳುತ್ತೇನೆ ಎಂದು ಕಾಂಚನ್ ಜರಿವಾಲಾ ಹೇಳಿದ್ದಾರೆ.

ಯಾವುದೇ ದೂರು ಸ್ವೀಕರಿಸಿಲ್ಲ-ಡಿಸಿಪಿ:ಸೂರತ್ ಪೂರ್ವದಿಂದ ಕಾಂಚನ್‌ ಜರಿವಾಲಾ ಸ್ವಯಂಪ್ರೇರಣೆಯಿಂದ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಆರ್.ಬಿ.ಭೋಗಾಯಾತ್ ಮಾಧ್ಯಮಗಳಿಗೆ ಖಚಿತ ಪಡಿಸಿದ್ದಾರೆ. ಇತ್ತ, ಕಾಂಚನ್‌ ಜರಿವಾಲಾ ಅಪಹರಣದ ಆರೋಪ ಕುರಿತಂತೆ ಯಾವುದೇ ದೂರು ಸ್ವೀಕರಿಸಿಲ್ಲ ಎಂದು ಉಪ ಪೊಲೀಸ್ ಆಯುಕ್ತ ಸಾಗರ್ ಬಾಗ್ಮಾರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಗುಜರಾತ್ ಚುನಾವಣೆ​: ನಾಮಪತ್ರ ಸಲ್ಲಿಕೆಗೆ ಐಷಾರಾಮಿ ಲಂಬೋರ್ಗಿನಿ ಕಾರಲ್ಲಿ ಬಂದ ಕಾಂಗ್ರೆಸ್​ ಅಭ್ಯರ್ಥಿ

ABOUT THE AUTHOR

...view details