ಅಹಮದಾಬಾದ್: 2002ರ ಕೋಮುಗಲಭೆಗೆ ಸಂಬಂಧಿಸಿದಂತೆ ಅಮಾಯಕರನ್ನು ಸುಳ್ಳು ಸಾಕ್ಷ್ಯ ಸೃಷ್ಟಿಸಿ ಸಿಲುಕಿಸಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರ ವಿಶೇಷ ತನಿಖಾ ತಂಡವು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ವರ್ಗಾವಣೆ ವಾರಂಟ್ ಮೂಲಕ ಬಂಧಿಸಿದೆ.
"ನಾವು ಸಂಜೀವ್ ಭಟ್ ಅವರನ್ನು ವರ್ಗಾವಣೆ ವಾರಂಟ್ ಆಧಾರದ ಮೇಲೆ ಪಾಲನ್‌ಪುರ ಜೈಲಿನಿಂದ ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಮಂಗಳವಾರ ಸಂಜೆ ಅವರನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ" ಎಂದು ಅಹಮದಾಬಾದ್ ಕ್ರೈಂ ಬ್ರಾಂಚ್‌ನ ಉಪ ಪೊಲೀಸ್ ಆಯುಕ್ತ ಚೈತನ್ಯ ಮಾಂಡ್ಲಿಕ್ ಹೇಳಿದ್ದಾರೆ.
ಕಳೆದ ತಿಂಗಳು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮತ್ತು ಗುಜರಾತ್‌ನ ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ.ಶ್ರೀಕುಮಾರ್ ಅವರನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಅವರು ಜೈಲಿನಲ್ಲಿದ್ದಾರೆ. 2002ರ ಗುಜರಾತ್ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದಲ್ಲಿ ಭಟ್, ಶ್ರೀಕುಮಾರ್ ಮತ್ತು ಸೆಟಲ್ವಾಡ್ ಅವರ ಪಾತ್ರಗಳ ಕುರಿತು ತನಿಖೆ ನಡೆಸಲು ಕಳೆದ ತಿಂಗಳು ರಾಜ್ಯ ಸರ್ಕಾರ ಎಸ್‌ಐಟಿ ತಂಡ ರಚಿಸಿತ್ತು. ಈ ತಂಡದಲ್ಲಿ ಮಾಂಡ್ಲಿಕ್ ಕೂಡ ಸದಸ್ಯರಾಗಿದ್ದಾರೆ.