ಕೆವಾಡಿಯಾ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 147ನೇ ಜನ್ಮದಿನದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಗೆ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೋರ್ಬಿಯಲ್ಲಿ ಸಂಭವಿಸಿದ ಕೇಬಲ್ ಸೇತುವೆ ಕುಸಿತದ ಘಟನೆಗೆ ಸಂತಾಪ ಸೂಚಿಸಿದ ಅವರು, ನಾನು ಇಲ್ಲಿ ಏಕತಾ ನಗರದಲ್ಲಿದ್ದರೂ ನನ್ನ ಮನಸ್ಸು ಮೋರ್ಬಿ ಸಂತ್ರಸ್ತರಿಗಾಗಿ ಮಿಡಿಯುತ್ತಿದೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದರು.
ಎಲ್ಲ ರೀತಿಯಲ್ಲೂ ಸರ್ಕಾರ ಸಂತ್ರಸ್ತರ ಕುಟುಂಬಗಳ ಜೊತೆಗಿದೆ. ಗುಜರಾತ್ ಸರ್ಕಾರ ನಿನ್ನೆ ಸಂಜೆಯಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಕೇಂದ್ರ ಸರ್ಕಾರದಿಂದ ಗುಜರಾತ್ ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್ ಮತ್ತು ಸೇನೆಯನ್ನು ನಿಯೋಜಿಸಲಾಗಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಸುದ್ದಿ ತಿಳಿದ ನಂತರವೇ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮೊರ್ಬಿ ತಲುಪಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಈ ದುರ್ಘಟನೆಯ ತನಿಖೆಗಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು. ಈ ದುಃಖದ ಸಮಯದಲ್ಲಿ ನಾವೆಲ್ಲ ಒಂದಾಗಿ ನಮ್ಮ ಕರ್ತವ್ಯದ ಹಾದಿಯಲ್ಲಿ ಮುನ್ನಡೆಯಲು ರಾಷ್ಟ್ರೀಯ ಏಕತಾ ದಿನ ಇಂದು ನಮಗೆ ಪ್ರೇರಣೆ ನೀಡುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ: ಮೋರ್ಬಿ ದುರಂತದಲ್ಲಿ 141ಕ್ಕೂ ಹೆಚ್ಚು ಜನರ ಸಾವು: ಸರ್ಕಾರಿ ಆಸ್ಪತ್ರೆಗಳ ರಜೆ ರದ್ದು, ಘಟನಾ ಸ್ಥಳಕ್ಕೆ ಮೋದಿ ಭೇಟಿ ಸಾಧ್ಯತೆ