ಗುವಾಹಟಿ (ಅಸ್ಸೋಂ):"ದೇಶದ ನಾಯಕ ಯಾರು ಎಂಬುದು ದೇಶದ ಜನರಿಗೆ ಈಗ ಅರಿವಿಗೆ ಬಂದಿದೆ'' ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅಸ್ಸಾಂ ನ್ಯಾಯಾಲಯಕ್ಕೆ ಹಾಜರಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಅವರು ಒಂದು ವರ್ಷದ ಹಿಂದೆ ಬಾರ್ಪೇಟಾ ರೋಡ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸೋಂನ ಬಾರ್ಪೇಟಾದಲ್ಲಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಸೋಮವಾರ ಹಾಜರಾಗಿದರು. ಜಿಗ್ನೇಶ್ ಮೇವಾನಿ ಅವರನ್ನು ಏಪ್ರಿಲ್ 21, 2022 ರಂದು ಭಾರತೀಯ ದಂಡ ಸಂಹಿತೆಯ ಕಲಂ 294, 323, 353, 354ರ ಅಡಿಯಲ್ಲಿ ಬಾರ್ಪೇಟಾ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 81/2022ರ ಅಡಿ ಬಂಧಿಸಲಾಗಿತ್ತು.
ಈ ಪ್ರಕರಣವು ಮೂಲತಃ ಸಾರ್ವಜನಿಕ ಕರ್ತವ್ಯಗಳಲ್ಲಿ ಪೊಲೀಸರಿಗೆ ಅಡ್ಡಿಪಡಿಸುವುದು ಹಾಗೂ ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಸಭ್ಯತೆಯ ಉಲ್ಲಂಘನೆ ಆರೋಪವನ್ನು ಹೊರಿಸಲಾಗಿತ್ತು. ಶಾಸಕರ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಇಂದು ಸೋಮವಾರ ನಡೆಸಿತ್ತು. ಗುಜರಾತ್ ಶಾಸಕ ಮೇವಾನಿ ಅವರು ಬೆಳಗ್ಗೆ ಬಾರ್ಪೇಟಾಗೆ ಆಗಮಿಸಿದರು. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಸ್ವಾಗತಿಸಿದರು.
ನ್ಯಾಯಾಲಯಕ್ಕೆ ಹಾಜರಾಗುವ ಮೊದಲು ಜಿಗ್ನೇಶ್ ಮೇವಾನಿ ಅವರು, ''ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದು, ನ್ಯಾಯವನ್ನು ನೀಡುತ್ತಾರೆ ಎಂಬ ನಂಬಿಕೆಯಿದೆ'' ಎಂದರು. 24ನೇ ಲೋಕಸಭೆ ಚುನಾವಣೆಯ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ''ನಿಜವಾದ ನಾಯಕ ಯಾರು ಎಂದು ದೇಶದ ಜನರಿಗೆ ತಿಳಿದಿದೆ. ರಾಹುಲ್ ಗಾಂಧಿಯವರ ಮೇಲಿನ ಪ್ರೀತಿಯು ಜನತೆಯನ್ನು ಆಕರ್ಷಿಸಿದೆ'' ಎಂದರು.
ಪ್ರಧಾನಿ ಮೋದಿ ವಿರುದ್ಧ ಜಿಗ್ನೇಶ್ ಮೇವಾನಿ ಗರಂ: ''ಅಶಾಂತಿಯಿಂದ ಕೂಡಿದ ಮಣಿಪುರದ ಜನರಿಗೆ ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನಿಂತಿಲ್ಲ. ಮಣಿಪುರದಲ್ಲಿ ಮಾತ್ರವಲ್ಲ, ದೇಶದಲ್ಲಿ ಎಲ್ಲಿ ಅನ್ಯಾಯವಾಗಿದ್ದರೂ ಅವರು ಜನರ ಪರವಾಗಿ ನಿಲ್ಲಬೇಕು. ಪ್ರಧಾನಿ ಮೋದಿ ಅವರು ನ್ಯಾಯವನ್ನು ಖಚಿತಪಡಿಸಿಕೊಳ್ಳಬೇಕು. ಆದರೆ, ಸುಳ್ಳು ಪ್ರಕರಣಗಳನ್ನು ದಾಖಲಿಸುವ ಪ್ರಧಾನಿಯಿಂದ ಯಾವ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ'' ಎಂದು ಜಿಗ್ನೇಶ್ ಮೇವಾನಿ ಕಿಡಿಕಾರಿದರು. ''ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ನಕಲಿಯಾಗಿದೆ. ಜೊತೆಗೆ ಸಂಪೂರ್ಣವಾಗಿ ಯೋಜಿತವಾಗಿದೆ. ನನ್ನನ್ನು ಹೆಚ್ಚು ಕಾಲ ಜೈಲಿನಲ್ಲಿಡುವ ಉದ್ದೇಶದಿಂದ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ'' ಎಂದು ಮೇವಾನಿ ಗಂಭೀರ ಆರೋಪ ಮಾಡಿದರು.
ವಿಚಾರಣೆ ಆ.5ಕ್ಕೆ ಮುಂದೂಡಿಕೆ: ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಆಗಸ್ಟ್ ಮೊದಲ ವಾರಕ್ಕೆ ನಿಗದಿಪಡಿಸಿದೆ. ಮೇವಾನಿ ಅವರು ಆಗಸ್ಟ್ 5 ರಂದು ಅಸ್ಸೋಂನ ಬಾರ್ಪೇಟಾದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ: ತಮಿಳುನಾಡಿನ ಸಚಿವರ ಮನೆ ಮೇಲೆ ED ದಾಳಿ