ಗಾಂಧಿನಗರ(ಗುಜರಾತ್):ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಇಂದು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿ ಸೇರ್ಡಪೆಯಾಗಿದ್ದಾರೆ. ಈ ಮೂಲಕ ಹೊಸ ಅಧ್ಯಾಯ ಆರಂಭ ಮಾಡಿದ್ದಾರೆ. ಗುಜರಾತ್ನ ಗಾಂಧಿನಗರದಲ್ಲಿ ಆಯೋಜನೆ ಮಾಡಲಾಗಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಮಲ ಮುಡಿದಿದ್ದಾರೆ.
ಮುಂದಿನ ಕೆಲ ತಿಂಗಳಲ್ಲಿ ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಬಿಟ್ಟಿರುವ ಪಾಟಿದಾರ್ ಸಮುದಾಯದ ಹಾರ್ದಿಕ್ ಪಟೇಲ್, ಬಿಜೆಪಿ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಮತ್ತಷ್ಟು ಆನೆಬಲ ಬಂದಂತಾಗಿದೆ. ಬಿಜೆಪಿ ಗುಜರಾತ್ ಘಟಕದ ಮುಖ್ಯಸ್ಥ ಸಿ ಆರ್ ಪಾಟೀಲ್, ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಮತ್ತು ಇತರೆ ನಾಯಕರ ಸಮ್ಮುಖದಲ್ಲಿ ಅವರು ಕೇಸರಿ ಪಕ್ಷಕ್ಕೆ ಸೇರಿದ್ದಾರೆ.
ಕಮಲದೊಂದಿಗೆ ಹೊಸ ಅಧ್ಯಾಯ ಆರಂಭಿಸಿದ ಹಾರ್ದಿಕ್... ಪಕ್ಷ ಸೇರ್ಪಡೆಗೂ ಮುಂಚಿತವಾಗಿ ಟ್ವೀಟ್ ಮಾಡಿದ್ದ ಹಾರ್ದಿಕ್ ಪಟೇಲ್, 'ರಾಷ್ಟ್ರದ ಹಿತ, ದೇಶದ ಹಿತ, ಜನಹಿತ ಹಾಗೂ ಸಮಾಜದ ಹಿತದೃಷ್ಟಿಯಿಂದ ಇಂದಿನಿಂದ ಹೊಸ ಅಧ್ಯಾಯ ಆರಂಭಿಸುತ್ತಿದ್ದೇನೆ. ಭಾರತದ ಯಶಸ್ವಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಭಾಯ್ ಮೋದಿ ಜೀ ಅವರ ನೇತೃತ್ವದಲ್ಲಿ ನಡೆಯುತ್ತಿರುವ ರಾಷ್ಟ್ರ ಸೇವೆಯ ಭಗೀರಥ ಕಾರ್ಯದಲ್ಲಿ ಓರ್ವ ಸಣ್ಣ ಯೋಧನಂತೆ ಕೆಲಸ ಮಾಡಿಕೊಂಡು ಹೋಗುವೆ' ಎಂದು ತಿಳಿಸಿದ್ದರು. ಭಾರತೀಯ ಜನತಾ ಪಾರ್ಟಿ ಸೇರ್ಪಡೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ತಮ್ಮ ಅಹಮದಾಬಾದ್ ನಿವಾಸದಲ್ಲಿ ಹಾರ್ದಿಕ್ ಪಟೇಲ್ ವಿಶೇಷ ಪೂಜೆ ಸಲ್ಲಿಸಿದ್ದರು.
ಇದನ್ನೂ ಓದಿ:ಮೋದಿ ನೇತೃತ್ವದ ಭಗೀರಥ ಕಾರ್ಯಕ್ಕೆ ಸಣ್ಣ ಯೋಧನಾಗಿ ಕೆಲಸ ಮಾಡುವೆ: ಹಾರ್ದಿಕ್ ಪಟೇಲ್
2015ರ ನಂತರ ಹೆಚ್ಚು ಬೆಳಕಿಗೆ ಬಂದಿದ್ದ ಹಾರ್ದಿಕ್ ಪಟೇಲ್ 2019ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು. ಗುಜರಾತ್ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು 2020ರ ಜುಲೈನಲ್ಲಿ ಇವರನ್ನ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಪಕ್ಷದಲ್ಲಿನ ಒಳಜಗಳ, ಅರಾಜಕತೆಯಿಂದ ಬೇಸತ್ತು 2022ರ ಮೇ 18ರಂದು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಸೇರಿದ್ದಾರೆ.
2019ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಹಾರ್ದಿಕ್ ಪಟೇಲ್ ಕೈ ಶಾಸಕರನ್ನು ಬಿಜೆಪಿಗೆ ಕರೆ ತರುತ್ತೇನೆಂದ ಪಟೇಲ್: ಪಕ್ಷ ಸೇರ್ಪಡೆ ನಂತರ ಮಾತನಾಡಿರುವ ಹಾರ್ದಿಕ್ ಪಟೇಲ್, ಇಂದಿನಿಂದ ಹೊಸದೊಂದು ಅಧ್ಯಾಯ ಆರಂಭಿಸುತ್ತಿದ್ದೇನೆ. ಪಕ್ಷದಲ್ಲಿ ಸಣ್ಣ ಸೈನಿಕನಾಗಿ ಕೆಲಸ ಮಾಡುತ್ತೇನೆ. ನಾವು ಪ್ರತಿ 10 ದಿನಕ್ಕೊಮ್ಮೆ ಕಾರ್ಯಕ್ರಮ ಮಾಡುತ್ತೇವೆ, ಇದರಲ್ಲಿ ಕಾಂಗ್ರೆಸ್ ಜೊತೆ ಅತೃಪ್ತ ಶಾಸಕರು ಸೇರಿದಂತೆ ಕಾರ್ಯಕರ್ತರನ್ನ ಬಿಜೆಪಿಗೆ ಕರೆತರುವ ಕೆಲಸ ಮಾಡಲಾಗುವುದು ಎಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಕೆಲಸ ಮಾಡಲು ಇಷ್ಟವಿಲ್ಲ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಗುಜರಾತ್ನಲ್ಲಿ 1995ರಿಂದಲೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ವಿಶೇಷವೆಂದರೆ ಗುಜರಾತ್ನಲ್ಲಿ ಬರೋಬ್ಬರಿ 6.5 ಕೋಟಿ ಪಾಟಿದಾರ್ ಸಮುದಾಯದ ಜನರಿದ್ದು, ಚುನಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಇದೀಗ ಹಾರ್ದಿಕ್ ಪಟೇಲ್ ಕಮಲ ಹಿಡಿದಿರುವ ಕಾರಣ, ಬಿಜೆಪಿ ಕೆಲಸ ಮತ್ತಷ್ಟು ಸುಲಭವಾಗಿದೆ.