ಗಾಂಧಿನಗರ: ಗುಜರಾತ್ ಪಂಚಾಯತ್ ಸೇವಾ ಆಯ್ಕೆ ಮಂಡಳಿಯು (ಜಿಪಿಎಸ್‌ಎಸ್‌ಬಿ) ಜೂನಿಯರ್ ಕ್ಲರ್ಕ್ ಹುದ್ದೆಗಳಿಗೆ ಇಂದು ನಡೆಸಬೇಕಿದ್ದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯು ಪ್ರಶ್ನೆಪತ್ರಿಕೆ ಸೋರಿಕೆಯಾಗಿ ರದ್ದುಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 15 ಮಂದಿ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವಿಚಾರವನ್ನು ರಾಜ್ಯ ಪಂಚಾಯತ್ ಪರೀಕ್ಷಾ ಮಂಡಳಿ ತಿಳಿಸಿದೆ.
ರಾಜ್ಯಾದ್ಯಂತ 2,995 ಕೇಂದ್ರಗಳಲ್ಲಿ 1,150 ಹುದ್ದೆಗಳಿಗೆ ನಡೆಯಬೇಕಿದ್ದ ಜೂನಿಯರ್ ಕ್ಲರ್ಕ್ ಪರೀಕ್ಷೆಗೆ 9,53,000 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 70,000 ಪರೀಕ್ಷಾ ಸಿಬ್ಬಂದಿ ಮತ್ತು 7,500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದ್ರೆ, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ನಿಗದಿಯಾದ ಸಮಯಕ್ಕಿಂತ ಒಂದು ಗಂಟೆ ಮೊದಲು ಪರೀಕ್ಷೆಯನ್ನು ಮೊಟಕುಗೊಳಿಸಲಾಗಿದೆ.
15 ಮಂದಿ ವಶಕ್ಕೆ:ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಆರೋಪದಡಿ 15 ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರೆಸಿದ್ದಾರೆ. ಈ ಪೈಕಿ ಕೆಲವರು ಬರೋಡಾದವರಾಗಿದ್ದು, ಪ್ರಮುಖ ಆರೋಪಿ ಒಡಿಶಾ ಸ್ಪರ್ಧಾತ್ಮಕ ಪರೀಕ್ಷೆಯ ಪಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪೊಲೀಸ್ ಮೂಲಗಳ ಮಾಹಿತಿಯಂತೆ, ದಂಧೆಯಲ್ಲಿ ತೊಡಗಿರುವ ಇನ್ನಷ್ಟು ಶಂಕಿತರನ್ನು ಬಂಧಿಸಲು ಐದು ಪೊಲೀಸ್ ತಂಡಗಳನ್ನು ತೆಲಂಗಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ದೆಹಲಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ:ಅಸಿಸ್ಟೆಂಟ್ ಪ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದೇಗೆ? ಚಾರ್ಜ್ ಶೀಟ್ನಲ್ಲಿ ಪಿನ್ ಟು ಪಿನ್ ಮಾಹಿತಿ